ವಿಜಯಪುರ: ಪರಿಸರ ಸಂರಕ್ಷಣೆಗಾಗಿ ಹಸಿರು ಇಂಧನ ಮತ್ತು ಉತ್ತಮ ಆರೋಗ್ಯಕ್ಕಾಗಿ ಸಾವಯವ ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಮಂಗಳವಾರ ವಿಜಯಪುರ ನಗರದಲ್ಲಿ ಹೆಸ್ಕಾಂ ನ ವಿಜಯಪುರ ನಗರ ಉಪವಿಭಾಗ- 1, ಶಿವಗಿರಿ ಶಾಖಾಧಿಕರಿಗಳ ಕಟ್ಟಡ ಹಾಗೂ ಭೂತನಾಳ ಶಾಖಾಧಿಕಾರಿಗಳ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಯೋಜನೆಗಳಿಗೆ ವಿದ್ಯುಚ್ಛಕ್ತಿ ಅಗತ್ಯವಾಗಿದೆ. ಆದರೆ, ಇದೇ ವಿದ್ಯುಚ್ಛಕ್ತಿ ಉತ್ಪಾದನೆಗೆ ಪರಿಸರಕ್ಕೂ ಹಾನಿಯಾಗಿದೆ. ಅಭಿವೃದ್ಧಿಗೆ ಅಗತ್ಯವಾಗಿರುವ ವಿದ್ಯುತ್ ಉತ್ಪಾದನೆಗೆ ಜಲವಿದ್ಯುತ್, ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ನಂಥ ಹಸಿರು ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕರೂ ಕೂಡ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಮನೆಗಳ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನೆ ಸಲಕರಣೆ ಬಳಸಬೇಕು. ಈ ಮೂಲಕ ಈಗಾಗಲೇ ಹಾನಿಯಾಗಿರುವ ಪರಿಸರವನ್ನು ಕಾಪಾಡಬೇಕಿದೆ. ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಉತ್ತಮ ಪರಿಸರ ಮತ್ತು ಭೂಮಂಡಲವನ್ನು ನಾವು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಡಬೇಕಾಗಿದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಆಹಾರ ಉತ್ಪಾದನೆಯಲ್ಲಿ ರಾಸಾಯನಿಕಗಳ ಬಳಕೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಿಸಲು ಹಂತಹಂತವಾಗಿ ಸಾವಯವ ಕೃಷಿಯ ಕಡೆಗೆ ಗಮನ ಹರಿಸಬೇಕು. ಉತ್ತಮ ಗುಣಮಟ್ಟದ ಆಹಾರ ಉತ್ಪಾದಿಸಿ ಸೇವಿಸುವಂತಾಗಬೇಕು. ವಿಷಮುಕ್ತ ಆಹಾರ ಸೇವನೆಯಿಂದ ಆರೋಗ್ಯ ಸದೃಢವಾಗಿಟ್ಟುಕೊಳ್ಳಬಹುದು ಎಂದು ಅವರು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ವಿದ್ಯುತ್ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 42 ವಿದ್ಯುತ್ ಸ್ಟೇಷನ್ ಮಾಡಿದ್ದೇವೆ. ಹಡಗಲಿ ಬಳಿ 400 ಕೆವಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಜಲಸಂಪನ್ಮೂಲ ಸಚಿವನಾಗಿದ್ದ ಅವಧಿಯಲ್ಲಿ ಜಿಲ್ಲೆಯ ನೀರಾವರಿಗಾಗಿ 10 ಮುಖ್ಯಸ್ಥಾವರ ಮಾಡಿ 1000 ಕಿ. ಮೀ. ಕಾಲುವೆ, ಏಷಿಯಾದ ಅತೀ ದೊಡ್ಡದಾದ ತಿಡಗುಂದಿ ವಯಾಡಕ್ಟ್ ನಿರ್ಮಿಸಿದ್ದೇನೆ. ಅತೀ ಶೀಘ್ರದಲ್ಲಿ ಇನ್ನು ಬಾಕಿ ಇರುವ 40ರಲ್ಲಿ 16 ಕೆರೆಗಳನ್ನು ಭರ್ತಿ ಮಾಡಲಾಗುವುದು. ಹೊರ್ತಿ, ಗುಂದವಾನ, ಇಂಚಗೇರಿ ಕೆರೆಗಳಿಗೂ ನೀರು ಹರಿಸಲಾಗುವುದು. ರೈತರು ಮತ್ತು ಜನರು ಸುಖವಾಗಿರಬೇಕು ಎಂಬುದು ನಮ್ಮ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಮಾತನಾಡಿದರು.
ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಮೇಯರ್ ದಿನೇಶ ಹಳ್ಳಿ, ಕಾರ್ಪೋರೇಟರ್ ಗಳಾದ ರಾಜು ಮಗಿಮಠ, ಅಪ್ಪು ಪೂಜಾರಿ, ರಾಜು ಚವ್ಹಾಣ, ಶಫೀಕ ಮನಗೂಳಿ, ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಉಪಸ್ಥಿತರಿದ್ದರು.
ಸಂಜು ಪೂಜಾರಿ ಭಾವಗೀತೆ ಹಾಡಿದರು. ಎಂ. ಎನ್. ದುಬೆ ಸ್ವಾಗತಿಸಿದರು. ಹುಮಾಯೂನ ಮಮದಾಪುರ ನಿರೂಪಿಸಿದರು. ರಾಜು ರಾಠೋಡ ವಂದಿಸಿದರು.
Subscribe to Updates
Get the latest creative news from FooBar about art, design and business.
ಸಾವಯವ ಆಹಾರ ಉತ್ಪಾದನೆಗೆ ಪ್ರೋತ್ಸಾಹ ಅಗತ್ಯ :ಸಚಿವ ಎಂ.ಬಿ.ಪಾಟೀಲ
Related Posts
Add A Comment

