ಬಬಲೇಶ್ವರದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ಥಿ & ಪರೀಕ್ಷಣಾ ಕೇಂದ್ರ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಮಾಹಿತಿ
ವಿಜಯಪುರ: ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಮತ್ತು ಟ್ರಾನ್ಸಫಾರ್ಮರ್ ಸಮಸ್ಯೆಗೆ ಪರಿಹಾರ ಒದಗಿಸಲು ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಮಂಗಳವಾರ ಬಬಲೇಶ್ವರ ಪಟ್ಟಣದಲ್ಲಿ ಹೆಸ್ಕಾಂ ಪರೀಕ್ಷಾ ಕೇಂದ್ರದ ಆವರಣದಲ್ಲಿ ರೂ. 27 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯುತ್ ಪರಿವರ್ತಕಗಳ ದುರಸ್ಥಿ ಮತ್ತು ಪರೀಕ್ಷಣಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ರೈತರು ಟಿಸಿ ದುರಸ್ಥಿಗಾಗಿ ಸಾವಿರಾರು ರೂಪಾಯಿ ಖರ್ಚುಮಾಡಿ ಅಲೆದಾಡಬೇಕಿತ್ತು. ಅಲ್ಲದೇ, ಹಣ ನೀಡಿದರೂ ಟಿಸಿ ದುರಸ್ಥಿಗೆ ತಿಂಗಳುಗಟ್ಟಲೆ ಕಾಯಬೇಕಿತ್ತು. ಇದಕ್ಕೆ ಪರಿಹಾರ ಒದಗಿಸಲು ಈಗ ಬಬಲೇಶ್ವರದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ಥಿ ಮತ್ತು ಪರೀಕ್ಷಣಾ ಕೇಂದ್ರ ಉದ್ಘಾಟಿಸಲಾಗಿದೆ. ಇದರಿಂದ ಪ್ರತಿ ತಿಂಗಳು ಗರಿಷ್ಠ 120 ಟಿಸಿಗಳ ನಿರ್ವಹಣೆ ದುರಸ್ಥಿ ಮತ್ತು ಪರೀಕ್ಷೆ ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ವಿದ್ಯುತ್ ಕ್ಷೇತ್ರದಲ್ಲಿ ಕೈಗೊಳ್ಳಲಾದ ಸುಧಾರಣೆ ಕ್ರಮಗಳಿಂದಾಗಿ ರೈತರಿಗೆ ಆಗುತ್ತಿದ್ದ ಕಿರುಕುಳ, ಅನ್ಯಾಯ, ತೊಂದರೆ ತಪ್ಪಿದೆ. ಗುಣಮಟ್ಟದ ವಿದ್ಯುತ್ ಪೂರೈಸಲು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯುತ್ ಪ್ರಸರಣ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಹಿರಿಯರು ಅನುಭವಿಸುತ್ತಿದ್ದ ನೀರಿನ ಸಮಸ್ಯೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ದೂರದೃಷ್ಠಿ ಇಟ್ಟುಕೊಂಡು ಮಾಡಿರುವ ಯೋಜನೆಗಳಿಂದಾಗಿ ನಿಗದಿತ ಅವಧಿಗಿಂತಲೂ ಸಾಕಷ್ಟು ಮುಂಚಿತವಾಗಿಯೇ ರೈತರ ಜಮೀನಿಗೆ ನೀರು ಬಂದಿದೆ. ಅಂದು ಮಾಡಲಾದ ಸಾಕಷ್ಟು ಟೀಕೆ, ಟಿಪ್ಪಣೆಗಳನ್ನು ಮೆಟ್ಟಿ ನಿಂತು ಒಂದು ಸಾವಿರ ಕಿ. ಮೀ. ಮುಖ್ಯ ಕಾಲುವೆ ನಿರ್ಮಿಸಿದ್ದೇನೆ, ವಿತರಣಾ ಕಾಲುವೆ ನಿರ್ಮಿಸಿದ್ದೇವೆ. ಅಸಾಧ್ಯ ಮತ್ತು ಮೂರ್ಖತನದ ಕೆಲಸ ಎಂದು ಅಪಹಾಸ್ಯ ಮಾಡುತ್ತಿದ್ದವರಿಗೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸುವ ಮೂಲಕ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದೇನೆ. ಅಧಿಕಾರದಲ್ಲಿದ್ದಾಗ ಒಂದೂವರೆ ಲಕ್ಷ ಎಕರೆ ನೀರಾವರಿ ಮಾಡಿದ್ದೇನೆ. ಇದು ಬಬಲೇಶ್ವರ ಮತ್ತು ತಿಕೋಟಾ ಭಾಗದ ರೈತರಿಗೆ ತಿಳಿದಿದೆ. ಮತಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳಿಗೆ ಡಿಜಿಟಲ್ ಕ್ಲಾಸ್ ರೂಂ ಮಾಡಲಾಗುತ್ತಿದೆ. ಮಿನಿ ವಿಧಾನ ಸೌಧ ನಿರ್ಮಆಮ, ಪಟ್ಟಣ ಪಂಚಾಯಿತಿ, ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದು, ಈಗ ಟಿಸಿ ದುರಸ್ಥಿ ಕೇಂದ್ರ ಉದ್ಘಾಟಿಸಿದ್ದೇನೆ. ಜಿಲ್ಲೆಯಲ್ಲಿ ಒಂದೂವರೆ ಕೋಟಿ ಗಿಡ ನೆಡಲಾಗಿದೆ. ಜಿಲ್ಲೆ ಮತ್ತು ರಾಜ್ಯಕ್ಕೆ ಶಕ್ತಿ ಮೀರಿ ಕೊಡುಗೆ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮೂಲಕ ಉದ್ಯೂಗ ಸೃಷ್ಠಿಸಲು ಶತಪ್ರಯತ್ನ ಮಾಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.
ಜಿ. ಪಂ. ಮಾಜಿ ಸದಸ್ಯ ವಿ. ಎನ್. ಬಿರಾದಾರ ಮಾತನಾಡಿ, ಬಬಲೇಶ್ವರ ಮತಕ್ಷೇತ್ರಕ್ಕೆ ಸಚಿವ ಎಂ. ಬಿ. ಪಾಟೀಲರು ಅಪಾರ ಕೊಡುಗೆ ನೀಡಿದ್ದಾರೆ. ನೀರು ಕಾಣದ ಜಾಗದಲ್ಲಿ ಜಲಕ್ರಾಂತಿ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ನಮಗೆ ಉಪಕಾರ ಮಾಡಿದವರಿಗೆ ಬೆನ್ನಿಗೆ ಸದಾ ನಿಲ್ಲಬೇಕು. ಅವರನ್ನು ಉತ್ತರೋತ್ತರವಾಗಿ ಬೆಳೆಸಬೇಕು. ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಯಲು ಸಾಧ್ಯ ಎಂದು ಹೇಳಿದರು.
ಮುಖಂಡ ಚನ್ನಪ್ಪ ಕೊಪ್ಪದ ಮಾತನಾಡಿ, ಎಂ. ಬಿ. ಪಾಟೀಲರ ದೂರದೃಷ್ಠಿ, ಅಭಿವೃದ್ಧಿಯಿಂದ ಕಾಳಜಿಯಿಂದ ಜಿಲ್ಲೆ ನಂದನವನವಾಗಿದೆ. ರೈತರಿಗೆ ಅಗತ್ಯವಾದ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಿದ್ದರಿಂದ ಬರದ ಬವಣೆ ತಪ್ಪಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಕೈಗಾರಿಕೆ ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಸಚಿವರಿಗೆ ಸದಾ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.
ಮುಖಂಡರಾದ ಕೆ. ಎಚ್. ಮುಂಬಾರೆಡ್ಡಿ ಮಾತನಾಡಿ, ಟಿಸಿ ಕೆಟ್ಟು ಹೋದರೆ ದುರಸ್ಥಿಯಾಗಲು ನಾಲ್ಕಾರು ವಾರಗಳು ಬೇಕಿತ್ತು. ಈ ಕೇಂದ್ರ ಸ್ಥಾಪನೆಯಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.
ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ ಮಾತನಾಡಿ, ಎಂ. ಬಿ. ಪಾಟೀಲರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಬರದ ನಾಡನ್ನು ಅಭಿವೃದ್ಧಿ ಬೀಡನ್ನಾಗಿ ಮಾಡಿದ್ದಾರೆ. ಪಕ್ಷಾತೀತವಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ಸದಾ ಅವರ ಬೆಂಬಲವಾಗಿ ನಿಲ್ಲೋಣ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ನಿಡೋಣಿ ಮತ್ತು ಮಮದಾಪುದಲ್ಲಿ ಶೀಘ್ರದಲ್ಲಿ ಹೆಸ್ಕಾಂ ಶಾಖಾ ಕಚೇರಿ ಪ್ರಾರಂಭಿಸಲಾಗುವುದು. ಜಿಲ್ಲೆಯಲ್ಲಿ ಟಿಸಿ ದುರಸ್ಥಿ ಮತ್ತು ಪರೀಕ್ಷೆಯ ಮೊದಲ ಕೇಂದ್ರ ಬಬಲೇಶ್ವರದಲ್ಲಿ ಕಾರ್ಯಾರಂಭ ಮಾಡಿದೆ. ಇದರಿಂದ ರೈತರು ಟಿಸಿಗಳ ದುರಸ್ಥಿಗೆ ಅಲೆದಾಡುವುದು ತಪ್ಪಿ ಸಮೀಪದಲ್ಲಿಯೇ ವಿದ್ಯುತ್ ಟಿಸಿ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸಂತೋಷ ಮ್ಯಾಗೇರಿ, ಕೆಎಂಎಫ್ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ ನಿಡೋಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಬಿ. ಜಿ. ಬಿರಾದಾರ, ಅಪ್ಪುಗೌಡ ಪಾಟೀಲ, ಚನ್ನಪ್ಪ ಕೊಪ್ಪದ, ರಫೀಕ್ ಸೋನಾರ, ಪ್ರಕಾಶ ಸೊನ್ನದ, ಮುದಕನಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಪುಟ್ಟು ಸಾವಳಗಿ, ಮಲ್ಲನಗೌಡ ಪಾಟೀಲ, ಸಿದ್ದಪ್ಪಗೌಡ ಬಿರಾದಾರ, ಸಿದ್ದಪ್ಪ ಹೊಸಮನಿ, ಚನ್ನಬಸಪ್ಪ ಕೋಟ್ಯಾಳ ಮುಂತಾದವರು ಉಪಸ್ಥಿತರಿದ್ದರು.

