ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಡ್ರೋನ್ ದೀದಿ ಜಕ್ಕಮ್ಮ ಗೆ ದೆಹಲಿಗೆ ಆಹ್ವಾನ
– ಡಾ.ಸಂತೋಷ ನವಲಗುಂದ
ಯಡ್ರಾಮಿ: ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಸರ್ಕಾರಗಳು ಜಾರಿಗೆ ತಂದಿರುವ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳು ಜಾರಿಯಲ್ಲಿವೆ. ಮಹಿಳೆ ಅಬಲೆಯಲ್ಲ; ಅವಳು ಸಬಲೆ ಅನ್ನುವ ಮಾತು ಪ್ರಸ್ತುತ ಸಮಸ್ತ ಮಹಿಳಾ ಲೋಕದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತ ಅನ್ನುವ ದಿನಗಳು ಮುಗಿದು ಹೋಗಿವೆ. ಪುರುಷನಷ್ಟೇ ಸಮಾನಳು ಎನ್ನುವುದನ್ನು ಈಗಾಗಲೇ ಮಹಿಳೆ ಎಲ್ಲ ರಂಗಗಳಲ್ಲಿಯೂ ಪ್ರಗತಿ ಸಾಧಿಸುತ್ತಿರುವುದು ಕಾಣುತ್ತಿದ್ದೇವೆ. ಈ ದಿಶೆಯಲ್ಲಿ ಕೃಷಿ ಕ್ಷೆತ್ರದಲ್ಲೂ ಮಹಿಳೆ ಹಿಂದೇನಿಲ್ಲ.
ಹೌದು! ಗ್ರಾಮೀಣ ಯುವ ಮಹಿಳೆ ನಮೋ ಡ್ರೋನ್ ದೀದಿ ಆಗುವ ಮೂಲಕ ಗ್ರಾಮೀಣ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗಲು ಸಜ್ಜುಗೊಂಡಿರುವುದು ಗ್ರಾಮೀಣ ರೈತರಲ್ಲಿ ಸಂತಸ ತಂದಿದೆ. ಇಂತಹ ಕೃಷಿ ಸಾಧಕಿಯೇ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಜಕ್ಕಮ್ಮ ಬಸವರಾಜ ಕೋಟ್ಯಾಳ.
ನಾಳೆ ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ‍್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ಬಂದಿರುವುದು ರೈತರಲ್ಲಿ ಹರ್ಷ ತಂದಿದೆ.
ಕೇಂದ್ರ ಸರ್ಕಾರದ ನಮೋ ಡ್ರೋನ್ ದೀದಿ ಯೋಜನೆಯಡಿ ಜಿಪಂ ಕಲಬುರಗಿ, ಹಾಗೂ ಸಂಜೀವಿನಿ – ಎನ್‌ಆರ್‌ಎಲ್‌ಎಮ್ ಯೋಜನೆಯಡಿ ರಚಿಸಿದ ಸ್ವಸಹಾಯ ಸಂಘಗಳ ಅರ್ಹ ಮಹಿಳೆಯರಿಗೆ ದೇಶದ ವಿವಿಧ ಭಾಗಗಳಲ್ಲಿ ತರಬೇತಿ ನೀಡುವ ಮೂಲಕ ನಮೋ ಡ್ರೋನ್ ದೀದಿ ಚಾಲನಾ ಪರವಾನಗಿ ಲಭ್ಯವಾಗಿದೆ. ಜಿಲ್ಲೆಯ ೧೨ ಜನ ದೀದಿಯರಲ್ಲಿ ಜಕ್ಕಮ್ಮ ಕೋಟ್ಯಾಳ ರೈತ ಮಹಿಳೆ ಒಬ್ಬಳು. ಹೈದರಾಬಾದನ ಕೇಂದ್ರದಲ್ಲಿ ತರಬೇತಿ ಪಡೆದು ಇವತ್ತು ರೈತರ ಡ್ರೋನ್ ಸಖಿಯಾಗಿ ರೈತನ ಕಾಯಕಕ್ಕೆ ಹೆಗಲು ನೀಡಿದ್ದು ಅನ್ನದಾತನ ಬದುಕಿನಲ್ಲಿ ಆಶಾದಾಯಕ ಬೆಳವಣಿಗೆ ಉಂಟುಮಾಡಿದೆ. ರೈತರ ಕೃಷಿ ಕರ‍್ಯಗಳಲ್ಲಿ ಬೆಳೆಗಳಿಗೆ ಕ್ರಿಮಿನಾಶಕ ಔಷಧಿ, ರಸಾಯನಿಕ ದ್ರವ ಪದಾರ್ಥಗಳನ್ನು ಸಿಂಪಡಿಸಲು ತುಂಬಾ ಸಹಕಾರಿಯಾಗಿದೆ ಈ ಡ್ರೋನ್. ಕಡಿಮೆ ಸಮಯದಲ್ಲಿ ಹೆಚ್ಚು ವಿಸ್ತೀರ್ಣದ ಜಮೀನಿನ ಬೆಳೆ ಸಂರಕ್ಷಣೆ ಮಾಡಿ ಕಾರ್ಮಿಕರ ಕೊರತೆ ನೀಗಿಸುವಲ್ಲಿ ಸೈ ಎನಿಸಿಕೊಂಡಿದೆ. ಇಂತಹ ಡ್ರೋನ್ ಸಖಿಗೆ ೭೮ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಆಮಂತ್ರಣ ಬಂದ ಕಾರಣವಾಗಿ ಡ್ರೋನ್ ದೀದಿ ಜಕ್ಕಮ್ಮ ಕೋಟ್ಯಾಳ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸುತ್ತಿರವುದಕ್ಕೆ ಗ್ರಾಮದ ರೈತಾಪಿ ವರ್ಗದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

“ಕೇಂದ್ರ ಸರ್ಕಾರದ ಯೋಜನೆಯಡಿ ನಾವು ಜಿಲ್ಲೆಯ ೧೨ ಜನ ಮಹಿಳೆಯರು ೨೦೨೩ ರ ನವ್ಹೆಂಬರ್ ತಿಂಗಳಲ್ಲಿ ಹೈದರಾಬಾದಿನ ಕೇಂದ್ರದಲ್ಲಿ ಎರಡು ವಾರಗಳ ತರಬೇತಿ ಪಡೆದು ಬಂದೆವು. ಈ ಡ್ರೋನ್ ರೈತರ ಕೃಷಿ ಕೆಲಸಕ್ಕೆ ತುಂಬಾ ಸಹಕಾರಿಯಾಗಲಿದೆ. ತರಬೇತಿ ಪಡೆದು ಡ್ರೋನ್ ಸಖಿಯಾದದ್ದಕ್ಕೆ ಇವತ್ತು ನಮಗೆ ದೆಹಲಿಯ ಸ್ವಾತಂತ್ರೋತ್ಸವ ಕಾರ‍್ಯಕ್ರಮದಲ್ಲಿ ಭಾಗವಹಿಸಲು ನಾನು ನನ್ನ ಪತಿ ಬಸವರಾಜ ಕೋಟ್ಯಾಳ ಅವರೊಂದಿಗೆ, ಇಡೀ ಜಿಲ್ಲೆಯ ತಂಡದೊಂದಿಗೆ ಹೋಗುತ್ತಿರವುದಕ್ಕೆ ಖುಷಿ ಎನಿಸಿದೆ. ನಮಗೆ ಕಾರ‍್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ.”
– ಜಕ್ಕಮ್ಮ ಬಸವರಾಜ ಕೋಟ್ಯಾಳ, ಮಳ್ಳಿ

