ದೇವರಹಿಪ್ಪರಗಿ: ಆಲಮಟ್ಟಿ ಆಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು ತಕ್ಷಣವೇ ಚಿಮ್ಮಲಗಿ ಮುಖ್ಯ ಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಹಿಟ್ಟಿನಹಳ್ಳಿ ಗ್ರಾಮದ ತಾಂಡಾ, ಸಂಜಯನಗರ, ಕಡಕಿತಾಂಡಾದ ಜನತೆ ಗ್ರೇಡ್-೨ ತಹಶೀಲ್ದಾರ್ ಎಸ್ ಎಚ್ ರಾಠೋಡ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ಆಗಮಿಸಿದ ಹಿಟ್ಟಿನಹಳ್ಳಿ ಸಹಿತ ವಿವಿಧ ತಾಂಡಾದ ಜನತೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ, ತಾಲ್ಲೂಕು ಸೇರಿದಂತೆ ಮತಕ್ಷೇತ್ರದಲ್ಲಿ ವಾಡಿಕೆಯಂತೆ ಮುಂಗಾರಿನ ಬಹುತೇಕ ಮಳೆಗಳು ರೈತ ಸಮುದಾಯದ ನಿರೀಕ್ಷೆಯಂತೆ ಆಗದೇ ಇದ್ದು, ಇದೇ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಪೂರೈಸುವ ಆಲಮಟ್ಟಿ ಆಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರು ಸಂಗ್ರಹವಾಗುತ್ತಿದೆ. ಜೊತೆಗೆ ಈಗ ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಆಲಮಟ್ಟಿ ಆಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಈ ನೀರನ್ನು ಕಾಲುವೆಗಳಿಗೆ ಹರಿಸಲು ಯಾವುದೇ ತೊಂದರೆಯಿಲ್ಲ. ಅದಕ್ಕಾಗಿ ತಕ್ಷಣವೇ ಕಾಲುವೆಗಳ ಮುಖಾಂತರ ನಿರಂತರ ನೀರು ಹರಿಸಿ ತಾಂಡಾಗಳಿಗೆ ಅನುಕೂಲ ಮಾಡಿಕೊಡಬೇಕು.
ದೇವರಹಿಪ್ಪರಗಿ ಭಾಗದ ಚಿಮ್ಮಲಗಿ ಮುಖ್ಯ ಕಾಲುವೆ ಹಾಗೂ ನಾಗಠಾಣ ಉಪಕಾಲುವೆಗಳಿಗೆ ಕಾಲುವೆಯ ಕೊನೆಯ ಭಾಗವಾದ ಅಂಕಲಗಿ ಕೆರೆ ಹಾಗೂ ಹಿಟ್ಟಿನಹಳ್ಳಿ ಬಾಂದಾರದವರೆಗೆ ತಲುಪುವಂತೆ ಕೂಡಲೇ ನೀರು ಹರಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ನಂತರ ಮನವಿ ಸಲ್ಲಿಸಿದರು.
ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಸ್ತೂರಿಬಾಯಿ ದೊಡಮನಿ, ಡಿ.ಬಿ.ನಾಯಿಕ್, ಸೀತಾರಾಮ ರಾಠೋಡ, ಪ್ರಶಾಂತ ರಾಠೋಡ, ರೈತಸಂಘದ ಸಂಪತ್ ಜಮಾದಾರ, ಸುನಂದಾ ಸೊನ್ನಹಳ್ಳಿ, ಶ್ರೀಧರ ಚವ್ಹಾಣ, ತುಕಾರಾಮ ದೊಡಮನಿ, ಕೇಸು ದೊಡಮನಿ, ಅವಿನಾಶ ಚವ್ಹಾಣ, ಬಾಬು ಜಾಧವ, ವಿಠ್ಠಲ ಚವ್ಹಾಣ, ವಿಕ್ರಮ ಚವ್ಹಾಣ, ಕಿರು ದೊಡಮನಿ, ಸುಶೀಲಾಬಾಯಿ ಚವ್ಹಾಣ, ಸುಮಿತ್ರಾ ಚವ್ಹಾಣ, ನವನೀತ ಚವ್ಹಾಣ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

