ಬಂಜಾರಾ ಸಂಘಟನಾ ಸಮಿತಿ ರಾಜ್ಯಾಧ್ಯಕ್ಷ ಪುಂಡಲೀಕ ಪವಾರ ಅಭಿಮತ
ವಿಜಯಪುರ: ಪಂಜಾಬ್ ರಾಜ್ಯ ವಿರುದ್ಧ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರ (ಕ್ರಮಿಲೆಯರ್) ಜಾರಿಗೆ ತರಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್ ತೀರ್ಪು ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ ಎಂದು ಬೆಂಗಳೂರಿನ ಭಾರತೀಯ ಬಂಜಾರಾ ಸಂಘಟನಾ ಸಮಿತಿ (ರಿ) ರಾಜ್ಯಾಧ್ಯಕ್ಷ ಪುಂಡಲೀಕ ಜ. ಪವಾರ ಖಂಡಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನಲ್ಲಿರುವ ವಿವಾದಾತ್ಮಕ ಕೆನೆಪದರದ ಬಗೆಗಿನ ಅಂಶ ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಈಗಾಗಲೇ ತಿರಸ್ಕಾರಗೊಂಡಿರುವ ನ್ಯಾ. ಎ. ಜೆ. ಸದಾಶಿವ ಆಯೋಗದ ವರದಿಯ ಕುರಿತು ಹೇಳಿಕೆ ನೀಡದೆ,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂದುಳಿದಿರುವಿಕೆ, ಪ್ರಾತಿನಿಧ್ಯ ಕುರಿತು ಸರ್ಕಾರದ ಬಳಿ ಪ್ರಾಯೋಗಿಕ ದತ್ತಾಂಶ ಇಲ್ಲದಿರುವುದರಿಂದ ಈ ವಿಚಾರದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ವಿನಂತಿಸಿದರು.
ಜನಾಂಗದ ಮರುಸಮೀಕ್ಷೆ ಆಗದ ಹೊರತು ಯಾವುದೇ ಕಾರಣಕ್ಕೂ ಆತುರವಾಗಿ ಒಳ ಮೀಸಲಾತಿ ಹಂಚಿಕೆ ಮಾಡಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಸಂತ ಚವ್ಹಾಣ ಬಂಜಾರಾ ಗಾಯಕರು ವಿಜಯಪುರ, ಕೃಷ್ಣಾ ಮೋ. ಚವ್ಹಾಣ ತಾಲೂಕಾಧ್ಯಕ್ಷರು ಮುದ್ದೇಬಿಹಾಳ ಭಾರತೀಯ ಬಂಜಾರಾ ಸಂಘಟನಾ ಸಮಿತಿ ಉಪಸ್ಥಿತರಿದ್ದರು.

