ವಿಜಯಪುರ: ದೃಢ ಮನಸ್ಸು, ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಮಾತ್ರ ಏನನ್ನಾದರೂ ಸಾಧಿಸಬಹುದು. ಶಿಸ್ತಿನ ಜೀವನಕ್ಕೆ ಒಳಪಡಿಸಿಕೊಂಡರೆ ಮಾತ್ರ ಜ್ಞಾನ ಸಂಪಾದನೆಯಾಗುತ್ತದೆ ಎಂದು ನಗರದ ಜ್ಞಾನ ಯೋಗಾಶ್ರಮದ ಬ್ರಹ್ಮಾನಂದ ಶ್ರೀಗಳು ಹೇಳಿದರು.
ಸೋಮವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ದಿ.ಪ್ರಭಾಕರ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ವಿದ್ಯಾರ್ಥಿಗಳ ಸ್ವಾಗತ ಹಾಗೂ ಶಾಲಾ ಸಂಸತ್ತಿನ ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಸಂಪಾದನೆಗೆ ವಿಪುಲ ಅವಕಾಶವಿರುತ್ತದೆ. ಅದನ್ನು ಸಂಗ್ರಹಿಸಿಕೊಂಡಲ್ಲಿ ಮುಂದೆ ಅದು ಬದುಕಿನ ಉಪಯೋಗಕ್ಕೆ ಬರುತ್ತದೆ ಎಂದರು.
ಇಸಿಓ ಎಲ್.ಎಸ್.ಬಿರಾದಾರರವರು ಶಾಲಾ ಸಂಸತ್ತಿನ ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ವಚನ ಭೋಧಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಉತ್ತಮ ಅಧ್ಯಯನ ಉತ್ತಮ ಹವ್ಯಾಸ ರೂಢಿಸಿಕೊಂಡು, ಪರಿಪೂರ್ಣ ವ್ಯಕ್ತಿತ್ವ ಪಡೆಯಬೇಕು. ಕಠಿಣ ಪರಿಶ್ರಮ ಮತ್ತು ನಿಗದಿತ ದಿನಚರಿ ವ್ಯವಸ್ಥಿತವಾಗಿ ನಿರ್ವಹಿಸಿ ಉತ್ತಮ ಅಭಿರುಚಿ ಆಸಕ್ತಿಗಳನ್ನು ಹೊಂದಿ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮುವುದು ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಿ.ಎಲ್.ಚವ್ಹಾಣ್ ಮಾತನಾಡುತ್ತ, ಶಾಲೆ ಮತ್ತು ಸಮಾಜದ ಋಣವನ್ನು ತೀರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಪುರಸ್ಕಾರ ಪಡೆದ ಮಕ್ಕಳು ಉನ್ನತ ಸ್ಥಾನ ಗಳಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಸಿಆರ್‌ಪಿ ಬಿ.ಎ.ಬಿರಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಬಂಜಾರಾ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಗುರು ಎಂ.ಬಿ.ಪೂಜಾರಿ, ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಸಂದೀಪ ರಾಠೋಡ, ವಿದ್ಯಾರ್ಥಿನಿಯರ ಪ್ರತಿನಿಧಿ ರಕ್ಷಿತಾ ನಾಯಿಕ, ಸಭಾಪತಿ ಭಾವನಾ ಚವ್ಹಾಣ್, ಪ್ರಧಾನ ಕಾರ್ಯದರ್ಶಿ ಪ್ರೇಮ ಚವ್ಹಾಣ್‌ರವರು ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗ, ಬಿಎಡ್ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಸಂದೀಪ ರಾಠೋಡ, ವಂದನಾರ್ಪಣೆ ಅರುಣ ಮ್ಯಾಗೇರಿ ಹಾಗೂ ನಿರೂಪಣೆ ಪ್ರತಿಭಾ ಬಳ್ಳಾರಿ ನೇರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

