ಸಿಂದಗಿ: ಸಂಸಾರ ನೌಕೆಯ ನಾವಿಕನಾಗಿ, ಕುಟುಂಬದ ರಕ್ಷಕನಾಗಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕನಾಗಿ, ಕುಟುಂಬಕ್ಕಾಗಿ ತಮ್ಮವರಿಗಾಗಿ ಹಗಲು ರಾತ್ರಿ ದುಡಿಯುವ ಏಕೈಕ ಜೀವ ಎಂದರೆ ಅಪ್ಪ ಎಂದು ನಾದಬ್ರಹ್ಮ ಖ್ಯಾತಿಯ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಹಂಸಲೇಖ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿಯ ನಬಿರೋಶನ್ ಪ್ರಕಾಶನ ವತಿಯಿಂದ ದಿ.ಖತಾಲಸಾಬ ಆಲಗೂರ ಇವರ ೨ನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ಯವಾಗಿ ಬೆಂಗಳೂರಿನ ಕೋರಮಂಗಲದ ಕೆ.ಎಸ್.ಆರ್.ಪಿ ೪ನೇ ಬೆಟಾಲಿಯನ್‌ನಲ್ಲಿ ಹಮ್ಮಿಕೊಂಡ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂದೆಯ ಹೆಸರಿನಲ್ಲಿ ಅವರ ಪುಣ್ಯ ಸ್ಮರಣೆ ದಿನದಂದು ಅಪ್ಪ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಎಸ್.ಆರ್.ಪಿಯ ಕಮಾಂಡೆಂಟ್ ಹಮಜಾಹುಸೇನ್ ಮಾತನಾಡಿ, ಇಂದಿನ ಮಕ್ಕಳಿಗೆ ಪಾಲಕರ ಮೇಲೆ ಗೌರವ, ಭಯ, ಭಕ್ತಿ ಇಲ್ಲದಾಗಿದೆ. ಜನ್ಮ ಕೊಟ್ಟ ತಂದೆ-ತಾಯಿಗಳನ್ನು ಕೊನೆಯ ದಿವಸಗಳಲ್ಲಿ ವೃದ್ರಾಶ್ರಮಗಳಲ್ಲಿ ದಿನ ಕಳೆಯುವಂತೆ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆಯೋಜಕ ಹೆಡ್‌ಕಾನ್ಸ್ಟೇಬಲ್ ಮೌಲಾಲಿ ಆಲಗೂರ ಮಾತನಾಡಿ, ಎನ್.ಎಂ ಬಿರಾದಾರ ಅವರು ಚಾಣಕ್ಯ ಕರಿಯರ್ ಅಕಾಡೆಮಿಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುವ ಜೊತೆಗೆ ಅನಾಥ, ನಿರ್ಗತಿಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆರ್ಥಿಕ ಸಹಾಯ ನೀಡಿದ್ದಾರೆ. ಹಾಗಾಗಿ ಈ ವರ್ಷದ ಮೊದಲ ಅಪ್ಪ ಪ್ರಶಸ್ತಿಗೆ ಇವರೇ ಸೂಕ್ತ ವ್ಯಕ್ತಿ ಎಂದು ಹೇಳಿದರು.
ಡಿ.ವೈ.ಎಸ್ಪಿ ಉಮಾರಾಣಿ ಎಸ್. ಇನ್ಸ್ಪೆಕ್ಟರ್ ಕೆ.ವಿಶ್ವನಾಥ, ಜ್ಯೋತಿರ್ಲಿಂಗ ಹೊನಕಟ್ಟಿ, ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ಎನ್.ಎಂ ಬಿರಾದಾರ ಮಾತನಾಡಿದರು.
ನಂತರ ಇದೇ ಮೊದಲ ಬಾರಿಗೆ ನಬಿರೋಶನ್ ಪ್ರಕಾಶನ ಬೋರಗಿ ವತಿಯಿಂದ ಸ್ಥಾಪಿಸಲ್ಪಟ್ಟ ಅಪ್ಪ ರಾಜ್ಯ ಪ್ರಶಸ್ತಿ ಹಾಗೂ ೫ಸಾವಿರ ನಗದು ಬಹುಮಾನವನ್ನು ಚಾಣಕ್ಯ ಅಕಾಡೆಮಿ ಮುಖ್ಯಸ್ಥ ಎಂ.ಎನ್ ಬಿರಾದಾರ ಇವರಿಗೆ ನೀಡಿ ಗೌರವಿಸಲಾಯಿತು. ಅಲ್ಲದೇ ಪೊಲೀಸ್ ಕಲಾವಿದರಿಗೆ ಆರಕ್ಷಕ ಕಲಾರತ್ನ ಪುರಸ್ಕಾರ ಮತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆಯ ಮೇಲೆ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ, ಡಿವೈಎಸ್ಪಿ ನಾಗೇಂದ್ರ ಸ್ವಾಮಿ,ಗದ್ದಿಗೆಪ್ಪ, ಸುರೇಶ್ ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರಿನ ಪಿಎಸ್‌ಐ ಆರ್.ಲಕ್ಷ್ಮೀ ಸೀತಾರಾಮು ನಿರೂಪಿಸಿದರು. ದಾವಣಗೆರೆ ಆರಕ್ಷಕ ದೇವರಾಜ್ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

