ಮಡಿಕೇಶ್ವರಕ್ಕೆ ಭೇಟಿ ನೀಡಿದ ಲೋಕಾ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಮತ
ಮುದ್ದೇಬಿಹಾಳ: ಸರ್ಕಾರಿ ನೌಕರರಿಗೆ ಸಾರ್ವಜನಿಕರ ತೆರಿಗೆ ಹಣದಿಂದ ವೇತನ ಪಾವತಿಯಾಗುತ್ತದೆ. ಪ್ರತಿಯೊಬ್ಬ ಸರ್ಕಾರಿ ನೌಕರನೂ ಸಾರ್ವಜನಿಕರಿಗೆ ಸರಿಯಾದ ಸೇವೆ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲರು ಹೇಳಿದರು.
ತಾಲೂಕಿನ ಮಡಿಕೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸರ್ಕಾರಿ ನೌಕರನ ವರ್ತನೆ ಸರಿಯಾರಬೇಕು. ತಮ್ಮ ಕರ್ತವ್ಯವನ್ನು ನಿಗಧಿತ ಅವಧಿಯಲ್ಲಿ ಮಾಡಬೇಕು. ವಿನಾಕಾರಣ ಸಾರ್ವಜನಿಕರನ್ನು ಅಲೆದಾಡಿಸಬಾರದು. ಸೇವೆ ನೀಡಲು ಯಾರೊಬ್ಬರ ಬಳಿಯೂ ಹಣ ನೀಡುವಂತೆ ಒತ್ತಾಯಿಸಬಾರದು. ಸರ್ಕಾರಿ ನೌಕರರು ತಮ್ಮ ಸೇವೆಗಾಗಿ ಹಣ ನೀಡುವಂತೆ ಒತ್ತಾಯಿಸಿದಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡುವಂತೆ ತಿಳಿಸಿದರು.
ಆರೋಗ್ಯ ಕೇಂದ್ರದ ಸಂಗ್ರಹಣಾ ಕೊಠಡಿ, ಪ್ರಯೋಗಾಲಯ, ವಾರ್ಡ, ಸಿಬ್ಬಂದಿಗಳ ದಿನಚರಿ ಪುಸ್ತಕ, ಔಷಧಿಗಳನ್ನು ಖುದ್ದು ತಾವೇ ಪರಿಶೀಲಿಸಿದ ಲೋಕಾಯುಕ್ತರು ಸಾರ್ವಜನಿಕರಿಗೆ ಸೇವೆ ನೀಡುವ ಅವರ ಜವಾಬ್ದಾರಿಯ ಬಗ್ಗೆ ತಿಳಿಸಿದರು.
ಈ ವೇಳೆ ಲೋಕಾಯುಕ್ತ ಅಧೀಕ್ಷಕ ಟಿ.ಮಲ್ಲೇಶ, ಉಪಾಧೀಕ್ಷಕ ಸುರೇಶ ರೆಡ್ಡಿ, ಇನ್ಸಪೆಕ್ಟರ್‌ಗಳಾದ ಆನಂದ ಡೋಣಿ ಮತ್ತು ಆನಂದ ಟಕ್ಕಣ್ಣವರ ತಾಲೂಕು ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ ಸೇರಿದಂತೆ ಮತ್ತೀತರರು ಇದ್ದರು.

