ವಿಜಯಪುರ: ಪುಸ್ತಕಗಳಿಲ್ಲದ ಕೊಠಡಿಯು ಆತ್ಮವಿಲ್ಲದ ಶರೀರಕ್ಕೆ ಸಮಾನ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು.
ಅವುಗಳಿಂದ ಪಡೆದ ಜ್ಞಾನ ನಮ್ಮ ಬದುಕಿಗೆ ಶಕ್ತಿ ಸಂಜೀವಿನಿ.
‘ಪುಸ್ತಕಂ ಹಸ್ತ ಭೂಷಣಂ’ ಎಂಬಂತೆ ಯುವಕರು ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ನಾಗಠಾಣ ಗ್ರಾಮದ ಗ್ರಂಥಾಲಯದಲ್ಲಿ ಶುಕ್ರವಾರದಂದು ಹಮ್ಮಿಕೊಂಡ ‘ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನ’ವನ್ನು ಉದ್ದೇಶಿಸಿ ಮಾತನಾಡಿದರು.
ಕಲಿಕೆ ಮತ್ತು ಜ್ಞಾನವನ್ನು ಹುಡುಕುವ ಉದ್ದೇಶಕ್ಕಾಗಿ ಪುಸ್ತಕಗಳನ್ನು ಓದುವ ಮತ್ತು ಆನಂದಿಸುವ ಅಭ್ಯಾಸವನ್ನು ಇಂದಿನ ಮಕ್ಕಳು-ಯುವಕರಲ್ಲಿ ಮರಳಿ ತರಲು ಪುಸ್ತಕ ಪ್ರೇಮಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.
ಓದು ಕಲಿಕೆಯ ಹೆಬ್ಬಾಗಿಲು. ಅದು ಅನಿವಾರ್ಯ ಕೌಶಲ. ವಿಶೇಷವಾಗಿ ಯುವಪೀಳಿಗೆಯನ್ನು ಬಾಧಿಸುವ ನಾನಾ ವ್ಯಸನ, ದುಶ್ಚಟ, ದುರಭ್ಯಾಸಗಳಿಗೆ ಓದುವ ಹವ್ಯಾಸವೇ ಸಂಜೀವಿನಿಯಾಗಿದೆ ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಬಾಲ್ಯದಿಂದಲೇ ಓದುವ ಪ್ರವೃತ್ತಿಯು ಸ್ವಕಲಿಕೆಗೆ ಅನುಕೂಲಕರ ವೇದಿಕೆ ನಿರ್ಮಿಸಿಕೊಡುತ್ತದೆ. ಪುಸ್ತಕವು ಸರ್ವರ ಪಾಲಿಗೂ ಅಧಿಕಾರಯುತ ಜ್ಞಾನ ನೀಡುತ್ತದೆ.
ಓದುವಿಕೆಯು ವಿಮರ್ಶಾತ್ಮಕ ಚಿಂತನೆ, ಕಲ್ಪನೆ ಮತ್ತು ಸಾಕ್ಷರತೆಯ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಮನುಷ್ಯನು ಪೀಳಿಗೆಯಿಂದ ಪೀಳಿಗೆಗೆ ಗ್ರಂಥಗಳ ಮೂಲಕ ಅನುಭವ, ಅರಿವನ್ನು ಹಸ್ತಾಂತರಿಸಬಲ್ಲನು ಎಂದು ಹೇಳಿದರು.
ಸಿದ್ಧಾರೂಢ ಅರಕೇರಿ, ಆನಂದ ಗಂಗನಳ್ಳಿ, ಅನಿಲ ಚಲವಾದಿ, ಪ್ರವೀಣ ಅರಕೇರಿ, ಮಲ್ಲಿಕಾರ್ಜುನ
ಸಮಗೊಂಡ, ಗಿರೀಶ ಹಂಡಿ, ಅನಿಲ ಶಿಂದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

