– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ಮನಗೂಳಿ, ಯರನಾಳ, ಇಂಗಳೇಶ್ವರ, ದಿಂಡವಾರ, ರಬಿನಾಳ, ಮಸಬಿನಾಳ, ನರಸಲಗಿ, ಇವಣಗಿ, ಕಣಕಾಲ, ಕಾನ್ನಾಳ, ಟಕ್ಕಳಕಿ, ಜೈನಾಪೂರ, ಜಾಯವಾಡಗಿ, ಬ್ಯಾಕೋಡ, ಸೋಲವಾಡಗಿ, ಹೂವಿನಹಿಪ್ಪರಗಿ ಸೇರಿದಂತೆ ವಿವಿಧೆಡೆ ಗುರುವಾರ ಸಂಜೆ ಮಳೆ ಸುರಿಯಿತು.
ಹಲವಾರು ದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ರೈತಬಾಂಧವರಿಗೆ ನಾಗಪಂಚಮಿಯಂದು ಬಂದ ಮಳೆ ಮಂದಹಾಸ ಮೂಡಿಸಿದೆ.ನಾಗರ ಪಂಚಮಿ ಹಬ್ಬದ ಸಿಹಿ ತಿನ್ನುತ್ತಾ ಮಳೆಯನ್ನು ರೈತರು ನೋಡಿ ಹರ್ಷವ್ಯಕ್ತಪಡಿಸಿದರು. ಬಿತ್ತನೆ ಮಾಡಿದ ನಂತರ ಅಷ್ಟಾಗಿ ಮಳೆ ಬಂದಿರಲಿಲ್ಲ. ಮಳೆಯಿಲ್ಲದೇ ಬೆಳೆ ಒಣಗುವ ಸ್ಥಿತಿ ಬಂದೊದಗಿತ್ತು. ಮೆಕ್ಕೆಜೋಳ, ತೊಗರಿ ಪ್ರಮುಖ ಆದಾಯ ಬೆಳೆಯಾಗಿರುವದರಿಂದಾಗಿ ಇವುಗಳ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಬಿತ್ತನೆಯಾದ ನಂತರ ಮಳೆಯೇ ಆಗಿರಲಿಲ್ಲ. ಆಷಾಢ ಗಾಳಿಗೆ ನಾಟಿದ ಬೆಳೆ ಒಣಗಿ ಹೋಗುತ್ತಿತ್ತು. ಮಳೆಯಿಲ್ಲದೇ ಇರುವದರಿಂದಾಗಿ ಅಂತರ್ಜಲ ಮಟ್ಟವೂ ಕುಸಿಯಲು ಆರಂಭವಾಗಿತ್ತು. ಇಂದು ಸಂಜೆ ಬಂದ ಮಳೆಯು ಬೆಳೆಗಳಿಗೆ ಆಸರೆಯಾಗಿದೆ.
ಬಿತ್ತುವ ಮೊದಲು ಉತ್ತಮ ಮಳೆಯಾಗಿರುವದರಿಂದಾಗಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಮಾಡಿದ ಒಂದೂವರೆ ತಿಂಗಳಿಂದ ಉತ್ತಮ ಮಳೆಯಾಗಿರಲಿಲ್ಲ. ಇದರಿಂದಾಗಿ ಬೆಳೆಗೆ ಮಳೆ ಅಗತ್ಯವಿದೆ. ಇಂದು ಸಂಜೆ ಬಂದ ಮಳೆ ಬೆಳೆಗೆ ಉತ್ತಮವಾಗಿದೆ. ಇದರಿಂದಾಗಿ ಬೆಳೆಗೆ ಅನುಕೂಲವಾಗಲಿದೆ ಎಂದು ಇಂಗಳೇಶ್ವರದ ರೈತ ನಿಂಗಪ್ಪ ಬೊಮ್ಮನಹಳ್ಳಿ ಹೇಳಿದರು.
ಕಳೆದ ಕೆಲವು ದಿನಗಳಿಂದ ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಇಷ್ಟು ದಿನ ಮಳೆಯಿಲ್ಲದ ಕಾರಣದಿಂದಾಗಿ ಕಾಲುವೆಯಲ್ಲಿ ಹರಿಯುತ್ತಿದ್ದ ನೀರನ್ನು ಕಾಲುವೆ ಪಕ್ಕದಲ್ಲಿರುವ ಜಮೀನುಗಳ ರೈತರು ಪೈಪೋಟಿಯ ಮೂಲಕ ತಮ್ಮ ತಮ್ಮ ಬೆಳೆಗಳಿಗೆ ಪಂಪ್ಸೆಟ್ ಮೂಲಕ ನೀರುಣಿಸುತ್ತಿರುವುದು ಕಂಡುಬಂದಿತ್ತು. ಇಂದು ಸುರಿದ ಮಳೆಯು ಬೆಳೆಗೆ ಆಸರೆಯಾದಂತಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
