ಮುದ್ದೇಬಿಹಾಳ: ಭಾರತ ದೇಶದಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಹೆಚ್ಚು ಮೌಢ್ಯಗಳಿಗೆ ಬಲಿಯಾಗಿದ್ದಾರೆ. ನಾವೆಲ್ಲರೂ ಬೆಳೆಯುವ ಭವಿಷ್ಯದ ಮಕ್ಕಳಿಗೆ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ನಾಲತವಾಡದ ಶ್ರೀ ವೀರೇಶ್ವರ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಪರಶುರಾಮ ಚೌಡಕೇರ ಹೇಳಿದರು.
ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಹಸಿರು ತೋರಣ ಗೆಳೆಯರ ಬಳಗ ಗುರುವಾರ ನಾಗರ ಪಂಚಮಿ ನಿಮಿತ್ತ ಹಮ್ಮಿಕೊಂಡಿದ್ದ “ಮಕ್ಕಳಿಗೆ ಹಾಲು ಕುಡಿಸುವ ಹಬ್ಬ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸೋಣ. ಆದರೆ ದೇವರ ಹೆಸರಿನಲ್ಲಿ ಅಮೂಲ್ಯವಾದ ಆಹಾರ ಪದಾರ್ಥಗಳನ್ನು ಅಭಿಷೇಕ, ಯಜ್ಞ, ಯಾಗಗಳ ಹೆಸರಿನಲ್ಲಿ ವ್ಯರ್ಥ ಹಾಳು ಮಾಡದೇ ಹಸಿದಿರುವ ಕೋಟ್ಯಂತರ ಬಡವರಿಗೆ ಕೊಡುವ ಕೆಲಸ ಮಾಡೋಣ ಎಂದರು.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಎನ್.ಎಸ್.ಕೋಡಬಾಗಿ ಮಾತನಾಡಿ, ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ತಾಲ್ಲೂಕಿನಲ್ಲಿ ಪರಿಸರ ಜಾಗೃತಿ ಜೊತೆಗೆ ವೈಚಾರಿಕತೆ ಬೆಳೆಸುವ ಮಾಡುತ್ತಿರುವುದು ಶ್ಲಾಘನೀಯ. ನಾವು ಮೌಢ್ಯಗಳ ಜೊತೆ ಬದುಕದೇ, ಆಯಾ ವಿಷಯದ ಸತ್ಯಾಸತ್ಯತೆ ಕುರಿತು ಚಿಂತನೆ ನಡೆಸಬೇಕು. ಬಸವಣ್ಣ, ಕನಕದಾಸರು, ಪುರಂದರದಾಸರು ಜನರ ಮೌಢ್ಯ ಕಳೆಯುವ, ಜಾತಿ ಬೇಧಗಳನ್ನು ನಿರ್ಮೂಲನೆಗೆ ನಿರಂತರವಾಗಿ ಶ್ರಮಿಸಿದರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ ಮಾತನಾಡಿ, ಹಾಲು ಅಮೂಲ್ಯವಾದ ಪರಿಪೂರ್ಣ ಆಹಾರವಾಗಿದೆ. ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನಗಳಿಂದ ಕೂಡಿದ ಹಾಲನ್ನು ಕಲ್ಲಿಗೆ ಎರೆಯದೇ, ಮಕ್ಕಳಿಗೆ, ಹಿರಿಯರಿಗೆ ಕುಡಿಸೋಣ. ಆರೋಗ್ಯವಂತ ಸಮಾಜ ನಿರ್ಮಿಸೋಣ ಎಂದರು.
ಬಳಗದ ಮಾಜಿ ಅಧ್ಯಕ್ಷ ಬಿ.ಎಸ್.ಮೇಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಎರಡು ನೂರು ಮಕ್ಕಳಿಗೆ ಹಾಲು ಕುಡಿಸಲಾಯಿತು. ಸಭೆಯಲ್ಲಿ ವಸತಿ ನಿಲಯದ ವಾರ್ಡನ್ ಭರತ ಪಾಟೀಲ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ಕೆ.ಆರ್.ಕಾಮಟೆ, ಅಶೋಕ ರೇವಡಿ, ಬಿ.ಎಸ್.ಮೇಟಿ, ರವಿ ಗೂಳಿ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕನಗೌಡ ಪಾಟೀಲ, ಡಾ.ಉತ್ಕರ್ಷ ನಾಗೂರ, ಕಿರಣ ಕಡಿ, ಬಿ.ಎಂ.ಪಲ್ಲೇದ, ರವಿ ತಡಸದ, ಸೋಮಶೇಖರ ಚೀರಲದಿನ್ನಿ, ವೀರೇಶ ಢವಳಗಿ, ಆರೋಗ್ಯ ಇಲಾಖೆಯ ಎಂ.ಎಸ್.ಗೌಡರ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ವಿದ್ಯಾ ದೇವತೆ ಸರಸ್ವತಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು. ವೀಣಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ದೈಹಿಕ ಶಿಕ್ಷಕ ರೇವಣಸಿದ್ದಯ್ಯ ಹಿರೇಮಠ ವಂದಿಸಿದರು.
Subscribe to Updates
Get the latest creative news from FooBar about art, design and business.
ಮಕ್ಕಳಿಗೆ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಿ :ಚೌಡಕೇರ
Related Posts
Add A Comment

