ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು | ತಹಸೀಲ್ದಾರ್ ಚಾವಲರ ಸೂಚನೆ
ಮೋರಟಗಿ: ಉಜನಿ ಜಲಾಶಯದಿಂದ ಭೀಮಾ ನದಿಗೆ ೧.೩೦ ಕ್ಯೂಸೆಕ್ ನೀರು ಬಿಡಲಾಗಿದ್ದು, ನದಿ ತೀರದ ಗ್ರಾಮಸ್ಥರು ಜಾಗೃತರಾಗಿರಬೇಕು ಎಂದು ಆಲಮೇಲ ತಹಸೀಲ್ದಾರ್ ಸುರೇಶ ಚಾವಲರ ಹೇಳಿದರು.
ಸಮೀಪದ ಬಗಲೂರ ಹಾಗೂ ಘತ್ತರಗಿ ಮಧ್ಯೆ ಭೀಮಾ ನದಿಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
ಭೀಮಾ ನದಿ ಪಾತ್ರದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ರೈತರು ಕಟ್ಟೆಚ್ಚರ ವಹಿಸಬೇಕು. ಮಕ್ಕಳು, ಜಾನುವಾರುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಘತ್ತರಗಿ ಬ್ಯಾರೇಜ್ ಬಳಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಮೀನುಗಾರರು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.
ನದಿ ತೀರದ ಬಗಲೂರ, ಹಾವಳಗಿ, ಶಿರಸಗಿ ಮತ್ತಿತರ ಗ್ರಾಮಗಳ ಬಳಿ ಭೀಮೆ ತುಂಬಿ ಹರಿಯುತ್ತಿದೆ. ನದಿ ಪಾತ್ರದಲ್ಲಿರುವ ಗ್ರಾಮಸ್ಥರು ಯಾವುದೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದರು.
ಇದೇ ಸಂರ್ಭದಲ್ಲಿ ಕಂದಾಯ ನಿರೀಕ್ಷಿಕ ಆರ್ ಐ ಅತ್ತಾರ, ಗಾಮ ಆಡಳಿತ ಆಧಿಕಾರಿ ಅಕ್ಕಮ್ಮ ಗಸ್ತಿ, ಗ್ರಾಮ ಲೆಕ್ಕಧಿಕಾರಿ ಮಾರುತಿ ಸಾಲುಂಕೆ, ಗ್ರಾಮ ಸಹಾಯಕರಾದ ದವಳತ್ತರಾಯ ರಾಮಗಾ, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.

