ಉಜನಿ ಜಲಾಶಯದಿಂದ 1.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ
ಚಡಚಣ: ಮಹಾರಾಷ್ಟ್ರದಲ್ಲಿ ಧಾರಕಾರ ಮಳೆಯಿಂದ ಮಹಾರಾಷ್ಟ್ರ ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಗಡಿಭಾಗದಲ್ಲಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಹದ ಭೀತಿ ಬರಬಹುದು ಮುನ್ನೆಚರಿಕೆಯಿಂದ ಗ್ರಾಮಸ್ಥರು ಇರಬೇಕು ಎಂದು ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಧೂಳಖೇಡ, ಶಿರನಾಳ ಭೇಟಿ ನೀಡಿ ನದಿ ಪಾತ್ರದ ನೀರಿನ ಮಟ್ಟ ಪರಿಶೀಲನೆ ಮಾಡಿದ ನಂತರ ಗ್ರಾಮಸ್ಥರಿಗೆ ತಿಳಿ ಹೇಳಿದರು.
ಮಹಾರಾಷ್ಟ್ರ ಉಜನಿ ಜಲಾಶಯದಿಂದ ಸೋಮವಾರ 1.20 ಲಕ್ಷ ಕ್ಯುಸಕ್ ನೀರು ಈಗಾಗಲೇ ಬಿಡಗಡೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಸತತವಾಗಿ ಮಳೆ ಇರುವುದರಿಂದ ಯಾವ ಕ್ಷಣವಾದರೂ ನೀರಿನ ಪ್ರಮಾಣ ಹೆಚ್ಚಗಬಹುದು ಎಂದು ಮಾಹಿತಿಯಿದೆ. ಹೀಗಾಗಿ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ಮುನ್ನೆಚರಿಕೆ ಕ್ರಮವಾಗಿ ನದಿ ತೀರದ ಜನರಿಗೆ ತಿಳಿಸಲಾಗಿದೆ. ಜನ ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಹೇಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಕುಂಬಾರ, ತಾಪಂ ಇಒ ಸಂಜಯ ಖಡಗೇಕರ್, ಕಂದಾಯ ನಿರೀಕ್ಷಕ ಪಿ ಜೆ ಕೊಡಹೊನ್ನ, ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಕೋಳಿ, ಗ್ರಾಪಂ ಪಿಡಿಒ ಈಶ್ವರ ಕಾಖಂಡಕಿ ಗ್ರಾಪಂ ಅಧ್ಯಕ್ಷ ದಿಲೀಪ ಶಿವಶರಣ ಇದ್ದರು.

