ವಿಜಯಪುರ: ಜನಪರ ನಾಯಕ ಭೀಮಸಿ ಕಲಾದಗಿ ಅವರ ನಿಧನಕ್ಕೆ ಬೃಹತ್ ಮತ್ತು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಕಲ ಸರಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ಕೈಗೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಂಡಿದ್ದಾರೆ.
ಭೀಮಸಿ ಕಲಾದಗಿ ಅವರು ವಯೋಸಹಜ ಕಾರಣಗಳಿಂದ ನಿಧನರಾಗಿದ್ದರು. ಈ ವಿಷಯ ತಿಳಿದ ತಕ್ಷಣ ಸಚಿವರು ಸಿಎಂ ಎಸ್. ಸಿದ್ಧರಾಮಯ್ಯ ಅವರೊಂದಿಗೆ ಮಾತನಾಡಿ, ಭೀಮಸಿ ಕಲಾದಗಿ ಅವರು ಕಳೆದ 50 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ರೈತರು, ಕಾರ್ಮಿಕರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಕ್ರಿಯಾಶೀಲರಾಗಿ ನಡೆಸಿದ ಹೋರಾಟದ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಸಕಲ ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಿ ಅವರಿಗೆ ನಿಜವಾದ ಶೋಕಗೌರವ ನೀಡದಂತಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಸರಕಾರ ಸಕಲ ಸರಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲು ಆದೇಶ ಹೊರಡಿಸಿದೆ.
ಈ ಮಧ್ಯೆ, ಭೀಮಸಿ ಕಲಾದಗಿ ವಯೋಸಹಜ ಕಾರಣಗಳಿಂದ ಭೀಮಸಿ ಕಲಾದಗಿ ನಿಧನರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ವಿಜಯಪುರ ಜಿಲ್ಲೆಯ ಮುಳವಾಡ ಏತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ರೈತರ ಜಾಗೃತಿ ಹೋರಾಟಗಳನ್ನು ಸಂಘಟನೆಗಳನ್ನು ನಡೆಸುತ್ತಾ ಜಿಲ್ಲೆಯಲ್ಲಿ ಸದಾ ಕ್ರಿಯಾಶೀಲರಾಗಿದ್ದರು. ನೀರಾವರಿ ಯೋಜನೆಗಳ ಅನುಷ್ಠಾನಗೊಳ್ಳುವವರೆಗೆ ಚಪ್ಪಲಿ ಧರಿಸದೆ ಬರಿಗಾಲಲ್ಲಿ ತಿರುಗಾಡುತ್ತೇನೆ ಎಂದು ಶಪಥ ಮಾಡಿ ಬರಿಗಾಲ ಭೀಮಶಿ ಎಂದೇ ಹೆಸರಾಗಿದ್ದ ಇವರು ಇತ್ತೀಚೆಗೆ ನೀರಾವರಿ ಯೋಜನೆಗಳ ಅನುಷ್ಠಾನದ ಕುರಿತು ಹೆಮ್ಮೆ ಮತ್ತು ಅಭಿಮಾನ ವ್ಯಕ್ತಪಡಿಸಿದ್ದು ಮರೆಯಲಾಗದು ಎಂದು ಅವರು ಶೋಕ ಸಂದೇಶದಲ್ಲಿ ನುಡಿನಮನ ಸಲ್ಲಿಸಿದ್ದಾರೆ.

ಸಚಿವ ಎಂ.ಬಿ.ಪಾಟೀಲರೊಂದಿಗೆ ಭೀಮಸಿ ಕಲಾದಗಿ ಚರ್ಚೆ (ಸಂಗ್ರಹ ಚಿತ್ರ)

