ರಾಜಸ್ಥಾನಿ ವರ್ತಕನಿಂದ ಆಶೀರ್ವಾದ ಪೈಪ್ಸ್ ಕಂಪನಿಯ ಹೆಸರಿನ ನಕಲಿ ಪೈಪುಗಳ ಮಾರಾಟ
ಮುದ್ದೇಬಿಹಾಳ: ಆಶೀರ್ವಾದ ಪೈಪ್ಸ್ ಲಿಮಿಟೆಡ್ ಕಂಪನಿಯ ಹೆಸರಿನ ಸಿಪಿವಿಸಿ ಪೈಪುಗಳ ನಕಲಿ ಪೈಪುಗಳನ್ನು ತಂದು ಮಾರಾಟ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ರಾಜಸ್ಥಾನಿ ವ್ಯಾಪಾರಿಯ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಓಂ ಸ್ಯಾನಿಟರಿ ಮತ್ತು ವಾಟರ್ ಫಿಟ್ಟಿಂಗ್ ಮಳಿಗೆಯಲ್ಲಿ ನಕಲಿ ಪೈಪುಗಳನ್ನು ತಂದು ಸಾರ್ವಜನಿಕರಿಗೆ ವಂಚಿಸಿದ್ದು ಶನಿವಾರ ಕಂಪನಿಯ ಫಿಲ್ಡ್ ಆಫೀಸರ್ ಬಂದು ಪರಿಶೀಲಿಸಿದಾಗ ಪೈಪುಗಳು ನಕಲಿಯಾಗಿರುವದು ಕಂಡು ಬಂದಿದೆ. ತಮ್ಮ ಕಂಪನಿಯ ನಕಲಿ ಪೈಪುಗಳನ್ನು ತಂದು ಸಾರ್ವಜನಿಕರಿಗೆ ಮಾರಾಟ ಮಾಡಿದ್ದು ಕಾಪಿರೈಟ್ ಕಾಯಿದೆಯ ಪ್ರಕಾರ ಅಪರಾಧವಾಗಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಆಧಾರದ ಮೇಲೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜಸ್ಥಾನಿ ವ್ಯಾಪಾರಿಗಳ ಬಳಿ ಯಾವುದೇ ವ್ಯಾಪಾರ ಮಾಡಬೇಕೆಂದರೂ ಸಾರ್ವಜನಿಕರು ಜಾಗರೂಕರಾಗಿರುವಂತೆ ಹಲವು ಸಾಮಾಜಿಕ ಹೋರಾಟಗಾರರು ಎಚ್ಚರಿಸಿದ್ದಾರೆ. ರಾಜಸ್ಥಾನಿ ವ್ಯಾಪಾರಿಗಳು ಹಲವು ಉತ್ತಮ ಗುಣಮಟ್ಟದ ಹೆಸರಾಂತ ಕಂಪನಿಗಳ ಉತ್ಪನ್ನಗಳನ್ನು ಥೇಟ್ ಅದೇ ರೀತಿ ಹೋಲುವ ನಕಲಿ ಉತ್ಪನ್ನಗಳನ್ನು ತಂದು ಅಗ್ಗದ ಬೆಲೆಗೆ ಮಾರಾಟಮಾಡುತ್ತಿದ್ದು, ಇದರಿಂದ ಸಾರ್ವಜನಿಕರು ಸಾಕಷ್ಟು ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಕೊಳ್ಳುವ ಮುನ್ನ ಗ್ರಾಹಕರು ಸಾಕಷ್ಟು ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ.

