ಸಾಯುವುದು ಅಷ್ಟು ಸುಲಭವಾ…? ಪ್ರತಿ ಸಲ ಆತ್ಮಹತ್ಯೆ ವಿಷಯ ಕಿವಿಗೆ ಬಿದ್ದಾಗ ನನ್ನ ಮನದಲ್ಲಿ ಮೂಡುವ ಪ್ರಶ್ನೆ ಇದು..
ನೀವು ಹೇಳ್ತಿರಾ. ಅಂತಹ ಪರಿಸ್ಥಿತಿ ಒತ್ತಡದಲ್ಲಿ ಸಿಲುಕಿದಾಗ ಬೇರೆ ದಾರಿ ಕಾಣದೆ ಸಾವಿನ ಹಾದಿ ಹಿಡಿತಾರೆ ಅಂತಾ, ಸರಿ ಒಪ್ಪುವೆ ಹಾಗಂತ ಅವರಂತ ಕಷ್ಟ ಬೇರೆ ಯಾರು ಅನುಭವಿಸಿಯೇ ಇಲ್ವಾ ..?
ಈ ವಿಶಾಲವಾದ ಪ್ರಪಂಚದಲ್ಲಿ ಸಂಪೂರ್ಣ ಸುಖಿಗಳು ಕೋಟಿಗೊಬ್ಬರು ಸಿಗಬಹುದು, ಉಳಿದಂತೆ ಎಲ್ಲರಿಗೂ ಒಂದಲ್ಲ ಒಂದು ಕಷ್ಟ ನೋವು ಇದ್ದೇ ಇರುತ್ತೆ. ಆ ದೇವರು ಮಹಾನ್ ಸ್ವಾರ್ಥಿ ಅನ್ನಬಹುದು ಏಕೆಂದರೆ ಎಲ್ಲರಿಗೂ ಸಂಪೂರ್ಣ ಸುಖ ಕೊಟ್ಟರೆ ನನ್ನ ಪೂಜೆ ಮಾಡುವವರು ಯಾರು ಎಂಬ ಯೋಚನೆ ಇರಬಹುದು. ಅವನ ಯೋಚನೆ ಸರಿಯಾಗಿದೆ ಅಲ್ವಾ ಏಕೆಂದರೆ ನಾವೆಲ್ಲಾ ಸಂಕಟ ಬಂದಾಗ ಮಾತ್ರ ದೇವರ ಮೊರೆ ಹೋಗ್ತಿವಿ, ಸುಖದಲ್ಲಿ ದೇವರ ಮನಸಾರೆ ಪೂಜಿಸಿ ಸ್ಮರಿಸುವದು ಕಡಿಮೆ ಎಂದೇ ಹೇಳಬಹುದು. ಸಂಪೂರ್ಣ ಸಂತೋಷ ಕೊಟ್ಟರೆ ಮನುಷ್ಯನ ಅಹಂಕಾರ ಗರ್ವ ಮೀತಿ ಮೀರಬಹುದು ಅನ್ನೋ ಉದ್ದೇಶ ಕೂಡ ಇರಬಹುದು ಅದಕ್ಕೆ ದೇವರು ಬದುಕಿನ ಪಾಠ ಕಲಿಸುತ್ತ, ದೇಹ ಮನಸ್ಸು ಗಟ್ಟಿ ಮಾಡಲು ಕಷ್ಟಗಳನ್ನು ಕೊಡ್ತಾನೆ ಇರ್ತಾನೆ..
ಚಿನ್ನವನ್ನು ಬೆಂಕಿಯಲಿ ಕಾಯಿಸಿ ಆಭರಣ ಎಂಬ ರೂಪ ಕೊಡುವಂತೆ. ನಮಗು ಕಷ್ಟ ಸೋಲು ಅವಮಾನ ಎಂಬ ಕುಲುಮೆಯಲ್ಲಿ ಬೇಯಿಸಿದ ಮೇಲೆಯೇ ದೇವರು ಸಂಪೂರ್ಣ ಸುಖ ಸಂತೋಷ ಸಿಗಲಿ ಅಂದು ಹರಸುವದು.. ಆದರೆ ನಾವು ಅಲ್ಲಿವರೆಗೆ ತಾಳ್ಮೆ ಇಂದ ಇರುವುದಿಲ್ಲ ಅನ್ನುವುದು ಅಷ್ಟೆ ಸತ್ಯ…
ಈ ಬದುಕಿನಲ್ಲಿ ಹುಟ್ಟಿದ ವೇಳೆ, ಹುಟ್ಟು ಬಣ್ಣದ ಬಗ್ಗೆ ಆಡಿಕೊಂಡು ಅವಮಾನಿಸಿ ಕಷ್ಟ ಕೊಡುವವರು, ಚುಚ್ಚು ಮಾತನಾಡುವವರು ಇದಾರೆ , ಸೋತರೆ ನಗ್ತಾರೆ ಗೆದ್ದರೆ ಅದೃಷ್ಟ ಅಂತಾರೆ.. ದುಡಿದರೆ ದುರಾಸೆ ಅಂತಾರೆ, ದುಡಿಯದೆ ಇದ್ದರೆ ಸೊಂಬೇರಿ ಅಂತಾರೆ. ಮಾತನಾಡಿದರೆ ಒಂದು ಮಾತು, ಮೌನವಾಗಿ ಇದ್ದರೆ ಮಗದೊಂದು ಮಾತು.. ನೋಡಲು ಚನ್ನಾಗಿ ಇದ್ದರೆ ಬೀದಿ ಕಾಮಣ್ಣರ ಕಾಟ, ಚನ್ನಾಗಿ ಇಲ್ಲ ಅಂದರೆ ಬಂಧುಗಳ, ಸುತ್ತ ಮುತ್ತಲಿನವರ ಚುಚ್ಚು ಮಾತು.. ಜನ ಹೇಗಿದ್ದರು ಅಂತಾರೆ ಅಂತಾ ಅಂಜಿ ಬಾಳಲು ಆಗುತ್ತಾ..? ಮುಖ ಮುಚ್ಚಿಕೊಂಡು ನಾಲ್ಕು ಗೋಡೆಯ ನಡುವೆ ಇರೋದಕ್ಕೆ ಆಗುತ್ತಾ..?
ಏನೇ ಆಗಲಿ ಸಮಸ್ಯೆ ಅವಮಾನ ಗೆದ್ದು ಬದುಕೋಣ, ಸಾಯುವುದೇ ಎಲ್ಲದಕ್ಕೂ ಕೊನೆ ಅಲ್ಲ..
ನೂರಾರು ರೋಗಗಳು ಅಂಟಿದ್ದರು, ವಯಸ್ಸು ಆದರು, ತಮ್ಮ ಕೈಯಿಂದ ಒಂದು ಕೆಲಸ ಮಾಡಲು ಆಗದೇ ಇದ್ದರು, ಕುಟುಂಬದವರೆಲ್ಲ ದೂರ ಇಟ್ಟರು ಬದುಕಬೇಕು ಅನ್ನೋ ಜೀವಗಳು ಇದಾವೆ, ಸಾವಿಗೆ ಹೆದರಿ ದೂರ ಓಡುತ್ತಾ ಬದುಕಿ, ರೋಗದಿಂದ ಗುಣ ಮುಖರಾಗಿ, ತಮ್ಮ ಕೆಲಸ ತಾವೇ ಮಾಡಿಕೊಂಡು, ಯಾರದೋ ಆಶ್ರಮದಲ್ಲಿ ತಮ್ಮ ಕುಟುಂಬದವರ ಎದುರು ನೋಡುತ್ತಾ ಬದುಕುತಿರುವವರ ನೋಡಿ ಕಲಿಯಬೇಕಿದೆ ನಾವು.. ಅಂತವರೆ ಅಷ್ಟು ಗಟ್ಟಿಯಾಗಿ, ಕುಟುಂಬದವರು ಇಂದಲ್ಲಾ ನಾಳೆ ಬಂದು ಕರೆದುಕೊಂಡು ಹೋಗುವರು ಎಂಬ ಭರವಸೆಯಲಿ ಬದುಕುತ್ತಿ ರುವಾಗ, ಹರೆಯದ ನಾವು, ವಿದ್ಯೆ ಬುದ್ಧಿ ಪ್ರತಿಭೆ ಇರುವಂತಹ ನಾವು ಯಾಕೆ ಯಾವುದೇ ಒಂದು ಸಮಸ್ಯೆ, ಕಾಯಿಲೆ, ಸೋಲು, ಅವಮಾನ ಕ್ಕೆ ಹೆದರಿ ಸಾಯುವದು..
ಯಾರು ದೂರಿದರು ಆಡಿಕೊಂಡು ನಕ್ಕರು ಸರಿ ಅದನ್ನು ಅಲ್ಲಿಯೇ ಬಿಟ್ಟು, ಓದಿದ ವಿದ್ಯೆ ಜಾಣ್ಮೆ ಪ್ರತಿಭೆ ಬಳಸಿಕೊಂಡು ನಮ್ಮ ಕಾಲ ಮೇಲೆ ನಾವು ನಿಂತು ಒಂಟಿಯಾದರು ಸರಿ ಬದುಕೋಣ.. ಬದುಕಿನ ದಾರಿಯಲ್ಲಿ ಮುಂದೆ ಎಂದಾದರು ದೂರಿದವರು ಆಡಿಕೊಂಡು ನಕ್ಕವರು ಮತ್ತೆ ಜೊತೆಯಾಗಬಹುದು ಅಲ್ವಾ..?
ಕಾಲ ಯಾವತ್ತು ಹೀಗೆಯೇ ಇರಲ್ಲಾ. ಇವತ್ತಿನ ಕಷ್ಟ ಸಮಸ್ಯೆ ಕೊನೆತನಕ ಇರುವುದಿಲ್ಲ.. ಇಂದಿನ ದಿನಕ್ಕೆ ಹೆದರಿ ಹೆತ್ತ ತಂದೆ ತಾಯಿ, ನೀವು ಹೆತ್ತ ಮಕ್ಕಳ ಅನಾಥರನ್ನಾಗಿ ಮಾಡಿ ಮುಂದಿನ ನಿಮ್ಮ ಸುಂದರ ಬದುಕು ಕೈಯಾರೆ ನೀವೇ ಹಾಳು ಮಾಡಿಕೊಂಡು , ನಿಮ್ಮ ಹೆತ್ತವರ, ನೀವು ಹೆತ್ತ ಮಕ್ಕಳ ಜೀವನ ಕಣ್ಣೀರಲ್ಲಿ ಮುಳುಗಿಸಿ, ಉಸಿರು ಇರುವ ತನಕ ಆ ಕಳೆದುಕೊಂಡ ನೋವಿನ ಹಿಂಸೆ ದಯವಿಟ್ಟು ನೀಡಬೇಡಿ..
ನೀವು ಬದುಕಿ ಅವರನ್ನು ಸಂತೋಷದಿಂದ ಬದುಕಲು ಬಿಡಿ.. ಸಾಧ್ಯವಾದರೆ ನಿಮ್ಮ ನೋವು ನಿಮ್ಮಲ್ಲಿಯೆ ಬಚ್ಚಿಟ್ಟುಕೊಂಡ ಹೆತ್ತವರಿಗೆ, ಹೆತ್ತ ಮಕ್ಕಳಿಗೆ ಸಂತೋಷದ ಬದುಕು ನೀಡಿ.. ಅವರೇ ನಿಮ್ಮನ್ನು ದೂರಿದ್ದರೆ, ಒಂಟಿಯಾಗಿ ಬದುಕಿ ಗೆಲ್ಲಿರಿ.. ಅವರನ್ನು ಹೊರತು ಪಡಿಸಿ ನಿಮ್ಮನ್ನು ಇಷ್ಟ ಪಡುವವರು ಇರುವರು.. ಪ್ರಪಂಚ ವಿಶಾಲವಾಗಿದೆ.. ನಮಗಿಂತ ನೂವುಂಡು ನಗುತ್ತಾ ಬದುಕುವವರು ಇದಾರೆ…