ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಆರಾಧ್ಯದೈವ ಜಗದ್ಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ರೇವಣಸಿದ್ದೇಶ್ವರ ದೇವರ ಬೆಳ್ಳಿಯ ಉತ್ಸವ ಮೂರ್ತಿ ಹಾಗೂ ರೇವಣಸಿದ್ದೇಶ್ವರ ಗುಡ್ಡದಲ್ಲಿರುವ ಅಕ್ಕನಾಗಮ್ಮನ ಗುಹೆಯಲ್ಲಿ ಪ್ರತಿಷ್ಠಾಪಿಸುವ ಅಕ್ಕನಾಗಮ್ಮ, ಬಸವಣ್ಣನವರ ಹಾಗೂ ಚನ್ನಬಸವಣ್ಣನವರ ಮೂರ್ತಿಗಳ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಶುಕ್ರವಾರ ಜರುಗಿತು.
ಗ್ರಾಮದ ಹಾಲಭಾವಿಯಿಂದ ಆರಂಭವಾದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿ ರೇವಣಸಿದ್ದೇಶ್ವರ ಗುಡ್ಡಕ್ಕೆ ಮೂರ್ತಿಗಳು ತಲುಪಿದವು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಆಯಾ ಪ್ರದೇಶದ ಮಹಿಳೆಯರು ರಂಗೋಲಿ ಚಿತ್ತಾರ ಹಾಕುವ ಮೂಲಕ ಶರಣರ ಮೂರ್ತಿಗಳಿಗೆ ಭವ್ಯ ಸ್ವಾಗತ ಕೋರಿದರು. ಮೆರವಣಿಗೆಯಲ್ಲಿ ಮಹಿಳೆಯರ ಕುಂಭದೊಂದಿಗೆ ವಚನದ ಕಟ್ಟನ್ನು ತಲೆ ಮೇಲೆ ಹೊತ್ತ ಮಕ್ಕಳು, ವಿವಿಧ ಶಾಲಾ ವಿದ್ಯಾರ್ಥಿಗಳು ಬಸವೇಶ್ವರ, ಅಕ್ಕನಾಗಮ್ಮ, ಅಕ್ಕಮಹಾದೇವಿ, ಚನ್ನಬಸವಣ್ಣ, ಅಂಬಿಗರ ಚೌಡಯ್ಯ, ಒನಕೆ ಒಬ್ಬವ್ವ ಸೇರಿದಂತೆ ವಿವಿಧ ಶರಣರ ವೇಷಭೂಷಣ ಧರಿಸಿ ಭಾಗವಹಿಸಿದ್ದು ಮೆರವಣಿಗೆಗೆ ಮೆರಗು ತಂದರು. ಮೆರವಣಿಗೆಯಲ್ಲಿ ಡೊಳ್ಳು, ಕರಡಿಮಜಲು, ಭಜನಾ ತಂಡಗಳು ಕಂಡುಬಂದವು. ಮೆರವಣಿಗೆಯಲ್ಲಿ ಸಿದ್ದೇಶ್ವರ ಟ್ರಸ್ಟ್ ಕಮೀಟಿ ಪದಾಧಿಕಾರಿಗಳು ಹಾಗೂ ರಾಷ್ಟ್ರಧರ್ಮ ವೇದಿಕೆಯ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.
ಜು. ೭ ರಂದು ಪ್ರಾತಃಕಾಲದಲ್ಲಿ ಅಕ್ಕನಾಗಮ್ಮ ಗುಹೆಯಲ್ಲಿ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ಬರಡೋಲದ ವೇದಮೂರ್ತಿ ವಿಶ್ವನಾಥ ಶಾಸ್ತ್ರೀಜಿಯವರಿಂದ ಅಕ್ಕನಾಗಮ್ಮ, ಬಸವಣ್ಣನವರ, ಚನ್ನಬಸವಣ್ಣನವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ, ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ರೇವಣಸಿದ್ದೇಶ್ವರ ದೇವರ ಬೆಳ್ಳಿಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರುವುದು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

