ರಾಜ್ಯ ಚುನಾವಣಾ ಆಯೋಗದ ಮಾನಿಟರಿಂಗ್ ಸೆಲ್ ಹಿರಿಯ ಮಾರ್ಗದರ್ಶಕ ಬಿ.ಎಸ್.ಹಿರೇಮಠ ಅಭಿಮತ
ವಿಜಯಪುರ: ಮುಕ್ತ ಹಾಗೂ ಪಾರದರ್ಶಕದಿಂದ ಕೂಡಿದ ಚುನಾವಣೆ ಅತೀ ಅವಶ್ಯಕ. ಇದರಿಂದ ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣ ಆಗುತ್ತದೆ ಹಾಗೂ ಉತ್ತಮ ಸರ್ಕಾರ ರಚನೆಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಮತದಾರರ ಸಾಕ್ಷರತಾ ಕ್ಲಬ್(ಇ ಎಲ್ ಸಿ) ಗಳು ಮಕ್ಕಳಲ್ಲಿ ಅರಿವನ್ನು ಮೂಡಿಸುವ ಕಾರ್ಯ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಮಾನಿಟರಿಂಗ್ ಸೆಲ್ನ ಹಿರಿಯ ಮಾರ್ಗದರ್ಶಕರಾದ ಬಿ. ಎಸ್. ಹಿರೇಮಠ ಅವರು ಕರೆ ನೀಡಿದರು.
ಗುರುವಾರ ವಿಜಯಪುರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ೨೦೨೪- ೨೫ನೇ ಸಾಲಿನ “ಮತದಾರರ ಸಾಕ್ಷರತಾ ಕ್ಲಬ್” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪದವಿಪೂರ್ವ ಕಾಲೇಜುಗಳ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳಾದ ಎಂ. ಬಿ. ರಜಪೂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಬೇಕು, ಇಂದಿನ ಮಕ್ಕಳೇ ನಾಳಿನ ನಾಗರಿಕರು. ಈಗಿನಿಂದಲೇ ಯುವಜನರಿಗೆ ಮತದಾನ ಮಹತ್ವದ ಕುರಿತು ತಿಳುವಳಿಕೆ ನೀಡಿ ಉತ್ತಮ ನಾಗರಿಕರಾಗಿ, ಸಮಾಜದ ಇತರರಿಗೂ ಮಾರ್ಗದರ್ಶನ ನೀಡುವಂತಾಗಬೇಕು. ಜಿಲ್ಲೆಯಲ್ಲಿ ಈಗಾಗಲೇ ಸ್ವೀಪ್ ಸಮಿತಿ ಹಾಗೂ ಇ.ಎಲ್.ಸಿ ಚಟುವಟಿಕೆಗಳಿಂದ ಮತದಾನದ ಪ್ರಮಾಣ ಹೆಚ್ಚಾಗಿದ್ದು ಅತೀವ ಸಂತಸ. ಮುಂಬರುವ ಚುನಾವಣೆಗಳಲ್ಲಿಯೂ ಸಹ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿ. ಬಿ. ನಾಟಿಕಾರ, ಗ್ರೇಡ್-೨ ತಹಶೀಲ್ದಾರರಾದ ತುಂಬಗಿ, ಜಿಲ್ಲಾ ಪಂಚಾಯತಿಯ ರಾವ್ ಬಹಾದ್ದೂರ್ ಭಾಗವಾನ, ಹಿರಿಯ ಉಪನ್ಯಾಸಕರಾದ ಎಸ್. ಸಿ. ತೋಳನೂರ, ಉಪನ್ಯಾಸಕಿ ಎಂ. ಎಸ್. ಮಾಲಿ, ಇನ್ನೋರ್ವ ಉಪನ್ಯಾಸಕ ಪಾಟೀಲ, ಹಾಗೂ ಆರ್. ಸಿ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.

