ಜನರ ಜೀವನ ಮಟ್ಟ ಸುಧಾರಿಸುವ ಅಭಿಯಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ
ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ “ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ”ದಡಿ “ಸಂಪೂರ್ಣತಾ ಅಭಿಯಾನ ಉತ್ಸವ” ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ತಾಲೂಕಾ ಮಟ್ಟದಲ್ಲಿನ ಜನರ ಜೀವನ ಮಟ್ಟ ಸುಧಾರಿಸಲು ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದರು.
ಈ ಯೋಜನೆಯಡಿ ರಾಜ್ಯದಲ್ಲಿ ಒಟ್ಟು ೧೪ ತಾಲ್ಲೂಕುಗಳನ್ನು ಗುರುತಿಸಿದ್ದು, ಇದರಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ತಾಳಿಕೋಟೆ ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ನೀತಿ ಆಯೋಗ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ವಿಜಯಪುರ ಮತ್ತು ತಾಲೂಕು ಆಡಳಿತ, ತಾಲೂಕು ಪಂಚಾಯತಿ ತಾಳಿಕೋಟಿ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ “ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ”ದಡಿ “ಸಂಪೂರ್ಣತಾ ಅಭಿಯಾನ ಉತ್ಸವ”ಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಆಯ್ಕೆಯಾದ ತಾಲ್ಲೂಕಿನಲ್ಲಿ ಜನರ ಜೀವನ ಮಟ್ಟವನ್ನು ಸುಧಾರಿಸಲು ಪ್ರಮುಖ ಸೇವಾ ವಲಯಗಳಾದ ಆರೋಗ್ಯ, ಪೌಷ್ಠಿಕತೆ, ಶಿಕ್ಷಣ, ಕುಡಿಯುವ ನೀರು ಮತ್ತು ನೈರ್ಮಲ್ಯ, ಕೃಷಿ, ಜಲ ಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮೇಲಿನ ಎಲ್ಲಾ ವಲಯಗಳಲ್ಲಿ ೨ ವರ್ಷಗಳ ಅವಧಿಯಲ್ಲಿ ರಾಜ್ಯ ಮಟ್ಟದ ಸರಾಸರಿ ಅಭಿವೃದ್ಧಿ ಸೂಚ್ಯಾಂಕಗಳಿಗೆ ಸರಿ ಸಮನಾಗಿ ಪ್ರಗತಿಯನ್ನು ಸಾಧಿಸಿ, ಸೂಚ್ಯಾಂಕಗಳ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಜುಲೈ ೪ ರಿಂದ ಸೆಪ್ಟೆಂಬರ್ ೩೦ ವರೆಗೆ ಈ ಅಭಿಯಾನವು ನಡೆಯಲಿದೆ ಎಂದು ಹೇಳಿದರು.
ಭಾರತ ಸರ್ಕಾರದ ನೀತಿ ಆಯೋಗದವರು ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮದ ಯಶಸ್ಸಿನ ಆಧಾರದನ್ವಯ ದೇಶದಲ್ಲಿ ೩೯ ಬಹು ಆಯಾಮದ ಸೂಚ್ಯಾಂಕಗಳಲ್ಲಿ ರಾಜ್ಯ ಮತ್ತು ಕೇಂದ್ರ ಮಟ್ಟದ ಸರಾಸರಿ ಅಭಿವೃದ್ಧಿಗಿಂತ ಕಡಿಮೆ ಇರುವ ೫೦೦ ತಾಲ್ಲೂಕುಗಳನ್ನು ಮಹತ್ವಾಕಾಂಕ್ಷಿ ತಾಲ್ಲೂಕುಗಳೆಂದು ಆಯ್ಕೆ ಮಾಡಿರುತ್ತಾರೆ. ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಆರು ಪ್ರಮುಖ ಕಾರ್ಯಕ್ಷಮತೆ ಸೂಚಕಗಳಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸುವ ಗುರಿಯನ್ನು ಹೊಂದಿದೆ. ಇದು ಮುಂದಿನ ೯೦ ದಿನಗಳಲ್ಲಿ ವ್ಯಾಪಕ ಪ್ರಚಾರ ನೀಡಿ ನಿಗದಿತ ಗುರಿ ಸಾಧಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ನೀತಿ ಆಯೋಗದಡಿ ಜಿಲ್ಲೆಯ ತಾಳಿಕೋಟೆ ತಾಲೂಕನ್ನು ಮಹತ್ವಾಕಾಂಕ್ಷಿ ತಾಲೂಕು ಎಂದು ಆಯ್ಕೆಮಾಡಲಾಗಿದೆ. ಸದ್ಯ ಆಯ್ಕೆ ಮಾಡಲಾದ ಜನರ ಜೀವನ ಮಟ್ಟವನ್ನು ಸುಧಾರಿಸಲು ಪ್ರಮುಖ ಸೇವಾ ವಲಯಗಳಾದ ಆರೋಗ್ಯ, ಶಿಕ್ಷಣ, ಮೂಲಸೌಲಭ್ಯ, ಸಾಮಾಜಿಕ ಅಭಿವೃದ್ಧಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ ಜನರ ಜೀವನಮಟ್ಟ ಎತ್ತರಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ತಾಲೂಕಿನಲ್ಲಿ ೬ ಪ್ರಮುಖ ಸೂಚಕಗಳ ಸಂಪೂರ್ಣತೆಯನ್ನು ಸಾಧಿಸಲು ಸುಸ್ಥಿರ ಪ್ರಯತ್ನ ಕೈಗೊಳ್ಳಲು ನೀತಿ ಆಯೋಗವು, ಇಂದಿನಿಂದ ೩ ತಿಂಗಳ ಕಾಲ ಸಂಪೂರ್ಣತಾ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದರು.
ಪ್ರಸವಪೂರ್ವ ಆರೈಕೆ ನೋಂದಣಿ, ಮಧುಮೇಹ ತಪಾಸಣೆ, ಅಧಿಕ ರಕ್ತದೊತ್ತಡ ಸ್ಕ್ರೀನಿಂಗ್ , ಪೂರಕ ಪೋಷಣೆ, ಮಣ್ಣಿನ ಆರೋಗ್ಯ ಪರೀಕ್ಷೆ ಹಾಗೂ ಸ್ವಸಹಾಯ ಗುಂಪುಗಳಿಗೆ ಆವರ್ತ ನಿಧಿ ನೀಡುವ ಮೂಲಕ ಶೇ.೧೦೦ ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳು ಶ್ರಮಿಸಬೇಕು ಮತ್ತು ತಾಲೂಕಿನಲ್ಲಿ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಸಂಪೂರ್ಣತಾ ಅಭಿಯಾನದಲ್ಲಿನ ಎಲ್ಲಾ ಸೂಚ್ಯಾಂಕಗಳಲ್ಲಿ ಪೂರ್ಣ ಪ್ರಗತಿಯನ್ನು ಸಾಧಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ೧೦ ಜನ ಗರ್ಭಿಣಿ ಮಹಿಳೆಯರಿಗೆ ತಾಯಿ ಕಾರ್ಡ್ , ೫ ಜನ ಮೇಲ್ವಿಚಾರಕರಿಗೆ ಪೋಷಣ್ ಟ್ರ‍್ಯಾಕರ್ ಮೊಬೈಲ್, ೫ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ದಿ ಯೋಜನೆಯ ಪಾಸ್ ಬುಕ್ ಹಾಗೂ ೨೦ ಜನ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಯಿತು. ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನೂ ಸಹ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ ಮಳಿಗೆಗಳು : ಜಲ ಜೀವನ ಮಿಷನ್, ತೋಟಗಾರಿಕೆ ಇಲಾಖೆ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳು ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯ ಮಾಹಿತಿಯುಳ್ಳ ಮಾಹಿತಿ ಕೇಂದ್ರ ಹೀಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಮಳಿಗೆಗಳು ಎಲ್ಲರ ಗಮನ ಸೆಳೆದವು.
ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ. ಬಿ. ಅಲ್ಲಾಪೂರ ಅವರು ಸಂಪೂರ್ಣತಾ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ತಾಳಿಕೋಟಿ ಪಟ್ಟಣದ ಬಸವೇಶ್ವರ ಸರ್ಕಲ್ ನಿಂದ ಸಂಗಮೇಶ್ವರ ಕಲ್ಯಾಣ ಮಂಟಪದವರೆಗೆ ಸಂಪೂರ್ಣತಾ ಅಭಿಯಾನ ಜಾಗೃತಿ ಜಾಥಾ ಅತೀ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿ.ಪಂ. ಯೋಜನಾ ನಿರ್ದೇಶಕರಾದ ಸಿ. ಬಿ. ದೇವರಮನಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಸಿ. ಬಿ ಕುಂಬಾರ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಗಳಾದ ಎ. ಬಿ. ಅಲ್ಲಾಪೂರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ. ಆರ್. ಬಿರಾದಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಎನ್. ಎಚ್. ನಾಗೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಕೆ ಚವ್ಹಾಣ, ಕೃಷಿ ಇಲಾಖೆಯ ಜಂಟಿನಿರ್ದೇಶಕರಾದ ರಾಜಶೇಖರ ವಿಲಿಯಮ್ಸ್, ಜಿಲ್ಲಾ ಮಟ್ಟದ ಮೀನುಗಾರಿಕೆ ಅಧಿಕಾರಿಗಳಾದ ಅನ್ನಪ್ಪಸ್ವಾಮಿ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ಡಾ. ಘೊಣಸಗಿ, ತಹಶೀಲ್ದಾರರಾದ ಪ್ರೇಮಸಿಂಗ ಪವಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ ಲಮಾಣಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಾವಳಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕುಂಬಾರ, ತಾಲೂಕು ಆರೋಗ್ಯ ಅಧಿಕಾರಿಗಳಾದ ಸತೀಶ ತಿವಾರಿ, ತಮದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ ಮಡಿವಾಳರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಹಿರೇಗೌಡರ, ಹಿರೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿ. ಎಸ್. ಮಠ, ಕೊಡಗಾನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಕೀರಣಗಿ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು, ಸಿಬ್ಬಂದಿಯವರು, ಸರ್ವ ಸದಸ್ಯರು, ಗರ್ಭಿಣಿಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಗತಿಪರ ರೈತರು ಹಾಗೂ ಇತರರು ಉಪಸ್ಥಿತರಿದ್ದರು.

ನೀತಿ ಆಯೋಗದ ಅಧಿಕಾರಿಗಳಿಂದ ಪರಿಶೀಲನೆ
ತಾಳಿಕೋಟಿ ತಾಲೂಕಿಗೆ ಇಂದು ಮಹತ್ವಾಕಾಂಕ್ಷಿ ತಾಲ್ಲೂಕು ಕಾರ್ಯಮದಡಿ ಸಂಪೂರ್ಣತಾ ಅಭಿಯಾನದ ಉತ್ಸವ ಕಾರ್ಯಕ್ರಮದ ನಿಮಿತ್ಯ ಜಿಲ್ಲೆಗೆ ಆಗಮಿಸಿರುವ ನೀತಿ ಆಯೋಗದ ಅಧಿಕಾರಿಗಳು “ಸಂಪೂರ್ಣತಾ ಅಭಿಯಾನ ಉತ್ಸವ”ದ ಕಾರ್ಯಕ್ರಮದಡಿ ಇರುವ ಸೂಚ್ಯಾಂಕಗಳಿಗೆ ಸಂಬಂಧಿಸಿದಂತೆ ಹಿರೂರ ಗ್ರಾಮ ಪಂಚಾಯತಿ, ತಾಳಿಕೋಟೆ ಪಟ್ಟಣದ ಪಶು ಆಸ್ಪತ್ರೆ ಆಸ್ಪತ್ರೆ, ತಮದಡ್ಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು, ಕೊಡಗಾನೂರ ಗ್ರಾಮ ಪಂಚಾಯತಿಯಲ್ಲಿ ಬಿ.ಎಸ್.ಎನ್.ಎಲ್ ಸಂಪರ್ಕ ವ್ಯವಸ್ಥೆ ಹಾಗೂ ತಮದಡ್ಡಿ ಗ್ರಾಮದ ಜಲ ಜೀವನ ಮಿಷನ್ ಯೋಜನೆಯಡಿ ನಿರ್ಮಿಸಿದ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

