ಗಬಸಾವಳಗಿ ಗ್ರಾಪಂಗೆ ಭೇಟಿ ನೀಡಿದ ಜಿಪಂ ಸಿಇಒ ರಿಷಿ ಆನಂದ್ ಸಲಹೆ
ಮೋರಟಗಿ: ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಪಂ ಸಿಇಒ ರಿಷಿ ಆನಂದ ಹೇಳಿದರು.
ಸಮೀಪದ ಗಬಸಾವಳಗಿ ಗ್ರಾಪಂಗೆ ಗುರುವಾರ ಭೇಟಿ ನೀಡಿ ಸಭೆ ನಡೆಸಿ ಅವರು ಮಾತನಾಡಿದರು.
ಆಲಮೇಲ ತಾಲೂಕಿನ ಗಬಸಾವಳಗಿ ಗ್ರಾಮಸ್ಥರು ಪಂಚಾಯಿತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಪಂ ಕಚೇರಿಗೆ ಬಂದು ಮನವಿ ಸಲ್ಲಿಸಿದ್ದಾರೆ. ಗ್ರಾ.ಪಂ ಆಡಳಿತ ಮಂಡಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಗೆ ಸಹಕರಿಸಬೇಕು. ಗ್ರಾಮದ ಪ್ರಗತಿಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ನಂತರ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ ತೆರಿಗೆ ವಸೂಲಾತಿ ಬಗ್ಗೆ ಚರ್ಚಿಸಿದರು. ಪ್ರಸಕ್ತ ವರ್ಷ ಶೇ.೪ರಷ್ಟು ಮಾತ್ರ ತೆರಿಗೆ ಸಂಗ್ರಹಣೆಯಾಗಿದೆ. ಒಂದು ವಾರದಲ್ಲಿ ಶೇ.೧೦ರಷ್ಟು ಗುರಿ ತಲುಪಬೇಕು ಎಂದು ಪಿಡಿಒ ಜ್ಯೋತಿ ಶೇಗಾವಿ ಅವರಿಗೆ ಸೂಚಿಸಿದರು.
ಸಂಗ್ರಹವಾದ ತೆರಿಗೆಯಲ್ಲಿ ಶೇ.೬ರಷ್ಟು ಹಣವನ್ನು ಗ್ರಂಥಾಲಯದಲ್ಲಿ ಪುಸ್ತಕಗಳು, ದಿನ ಪತ್ರಿಕೆಗಳನ್ನು ಖರೀದಿಸಲು ಉಪಯೋಗಿಸಬೇಕು ಎಂದು ಸೂಚಿಸಿದರು.
ಆಹೇರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಎಸ್ ಡಿಎಂಸಿ ರಚಿಸಿ ಕಚೇರಿಗೆ ವರದಿ ಸಲ್ಲಿಸುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿದರು.
ಕೆಲವು ರೈತರು ತಮ್ಮ ಹೊಲದಿಂದ ನೀರು ಕೊಡಲು ಸಿದ್ಧರಿದ್ದಾರೆ. ಅವರ ಬಾವಿಗೆ ವಿದ್ಯುತ್ ಪರಿವರ್ತಕ ಅಳವಡಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈಗಾಗಲೇ ವಿದ್ಯುತ್ ಪರಿವರ್ತಕ ತರಲಾಗಿದ್ದು, ಅದನ್ನು ಇನ್ನೆರಡು ದಿನಗಳಲ್ಲಿ ಅಳವಡಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ ಅಜೂರ ಮಾತನಾಡಿ, ಮೂರು ದಿನಗಳೊಳಗೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಾಮಾನ್ಯ ಸಭೆ ಕರೆದು
೧೫ನೇ ಹಣಕಾಸು ಯೋಜನೆ ಮತ್ತು ನರೇಗಾ ಕ್ರಿಯಾಯೋಜನೆ ಕುರಿತು ಚರ್ಚಿಸಿ ಎಲ್ಲ ಸಮಸ್ಯೆ ಪರಿಹರಿಸಬೇಕು ಎಂದು ಪಿಡಿಓ ಮತ್ತು ಸದಸ್ಯರಿಗೆ ಸೂಚಿಸಿದರು.
ಉಪಕಾರ್ಯದರ್ಶಿ ವಿಜಯಕುಮಾರ್ ಅಜೂರ್, ಇಒ ಫರಿದಾ ಪಠಾಣ, ರಾಮು ಜಿ. ಅಗ್ನಿ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿಗಳು, ಸದಸ್ಯರು, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಸಿದ್ದರಾಮ ಅಂಕಲಗಿ, ಎ.ಎ.ದುರ್ಗದ, ಜಿ.ವೈ.ಮುರಾಳ, ಎನ್. ಎಂ.ಗಬಸವಳಗಿ, ತಾರನಾಥ್ ರಾಠೋಡ, ಆರೀಫ್ ಬಿರಾದಾರ, ಶಂಭುಲಿಂಗ ಹಿರೇಮಠ, ರಾಜಶೇಖರ್ ಜೋತಗೊಂಡ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿ ಶೇಗಾವಿ, ನರೇಗಾ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ತಾಲೂಕು ಐ ಇ ಸಿ ಸಂಯೋಜಕರು, ಗ್ರಾಪಂ ಸಿಬ್ಬಂದಿ ಇದ್ದರು.

