ಅಕ್ಕಮಹಾದೇವಿ ಮಹಿಳಾ ವಿವಿ ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಿಂದ ಕ್ಷೇತ್ರ ಕಾರ್ಯ ಅಧ್ಯಯನ
ತಿಕೋಟಾ: ತಾಲೂಕಿನ ಟಕ್ಕಳಕಿ ಗ್ರಾಮ ಪಂಚಾಯತಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು ಭೇಟಿ ನೀಡಿ, ಕ್ಷೇತ್ರ ಕಾರ್ಯ ಅಧ್ಯಯನ ಕೈಗೊಂಡರು.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಸಿನ ಮನೆ, ಅಮೃತ ಸರೋವರ, ಶಾಲಾ ಅಭಿವೃದ್ಧಿ ಕಾಮಗಾರಿಗಳು, ಘನ ತ್ಯಾಜ್ಯ ವಿಲೇವಾರಿ ಘಟಕ ಸೇರಿ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಕ್ಕಮಹಾದೇವಿ ಪವಾರ ಅವರು ಪ್ರಶಿಕ್ಷಣಾರ್ಥಿಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳ, ಕಾಮಗಾರಿಗಳ, ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ನಂತರ ಮಾತನಾಡಿದ ಅವರು “ಗ್ರಾಮದಲ್ಲಿರುವ ಸಮಸ್ಯೆಗಳನ್ನು ಅಳಿಸಿ, ಸುಸ್ಥಿರ ಗ್ರಾಮ ನಿರ್ಮಾಣ ನಮ್ಮ ಗುರಿಯಾಗಿದೆ. ಎಲ್ಲ ಚುನಾಯಿತ ಸದಸ್ಯರ ಸಹಕಾರದಿಂದ ಗ್ರಾಮದಲ್ಲಿ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಮುಖ್ಯವಾಗಿ ಕುಡಿಯುವ ನೀರು, ನೈರ್ಮಲ್ಯ ಹಾಗೂ ಉದ್ಯೋಗ ಖಾತರಿಯಲ್ಲಿ ಯಾವದೇ ರೀತಿಯ ತೊಂದರೆಯಾಗದಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಯಾವದೇ ರೀತಿಯ ಸಮಸ್ಯೆ ಹೊಂದಿದ ವ್ಯಕ್ತಿ ಬಂದರೂ ಸಹಿತ ನಮ್ಮ ಗ್ರಾಮ ಪಂಚಾಯತಿಯಲ್ಲಿ ಅದಕ್ಕೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಬೇರೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇದ್ದರೂ ಅದಕ್ಕೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆಯನ್ನು ನಾವು ಕೈಗೊಳ್ಳುತ್ತೇವೆ.
ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಎಲ್ಲ ಅಧ್ಯಯನಕ್ಕಿಂತ ನಮ್ಮ ಸಮಾಜ ಕಾರ್ಯ ಅಧ್ಯಯನ ಬಹಳ ವಿಭಿನ್ನವಾದ ಅಧ್ಯಯನವಾಗಿದ್ದು, ಕಲಿಕೆಯ ಅವಧಿಯಲ್ಲಿಯೇ ಕ್ಷೇತ್ರ ಕಾರ್ಯ ನಿರ್ವಹಣೆಯಿಂದ ಸಾಕಷ್ಟು ಅನುಭವ ಪಡೆಯುತ್ತೇವೆ, ಆ ಅನುಭವದಿಂದ ನಮ್ಮಲ್ಲಿ ಹೊಸ ಹೊಸ ಕಲಿಕೆಗಳಾಗುತ್ತವೆ. ಸಮಾಜ ಕಾರ್ಯ ಅಧ್ಯಯನದಲ್ಲಿ ತರಗತಿಯಲ್ಲಿ ಕಲಿಯುವದಕ್ಕೂ, ಕ್ಷೇತ್ರ ಕಾರ್ಯದ ಮೂಲಕ ಕಲಿಯುವದಕ್ಕೂ ತುಂಬಾ ವ್ಯತ್ಯಾಸವಿದೆ. ತರಗತಿ ಕಲಿಕೆಗಿಂತ ನಮಗೆ ಕ್ಷೇತ್ರಕಾರ್ಯದ ಅಧ್ಯಯನ ಬಹಳ ಅವಶ್ಯಕವಾಗಿದೆ. ಹೀಗಾಗಿ ನೀವುಗಳು ಕ್ಷೇತ್ರ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಕೈಗೊಳ್ಳಿ ಎಂದು ಹೇಳಿದರು.
ಈ ವೇಳೆ ಗ್ರಾಮ ಪಂಚಾಯತಿ ಪಿಡಿಓ ಅಕ್ಕಮಹಾದೇವಿ ಪವಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಕಾರ್ಯದರ್ಶಿ ಎನ್.ಓ.ತಳ್ಳಿ, ತಾಂತ್ರಿಕ ಸಹಾಯಕ ಅಭಿಯಂತರ ರೇಷ್ಮಾ ಬಾಗವಾನ, ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಾದ ಕು.ತೇಜಸ್ವಿನಿ ಕೋಲಾರ, ಕು.ವರ್ಷಾ ಬಬಲೇಶ್ವರ, ಕು. ಸುಶ್ಮಿತಾ ಹರನಾಳ, ಗ್ರಾಮ ಪಂಚಾಯತಿಯ ಚನ್ನಬಸಪ್ಪ ಪೂಜಾರಿ, ಅರುಣ ಆಕಳವಾಡಿ, ಜಲ ಜೀವನ ಮಿಷನ್ ಯೋಜನೆಯ ಶಿವಾನಂದ ಬಡಿಗೇರ ಸೇರಿದಂತೆ ಇತರರು ಇದ್ದರು.

