
– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಉತ್ತರ ಕರ್ನಾಟಕದಲ್ಲಿ ರೈತ ಬಾಂಧವರು ಕೃಷಿಗೆ ಹಾಗೂ ಜಾನುವಾರುಗಳಿಗೆ ಸಂಬಂಧಿಸಿದಂತೆ ಹಲವು ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಅವುಗಳಲ್ಲಿ ಕಾರಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆಯು ಪ್ರಮುಖವಾಗಿದೆ. ಈ ವರ್ಷದ ಮಣ್ಣೆತ್ತಿನ ಅಮವಾಸ್ಯೆಯು ಜುಲೈ ೫ರಂದು ಆಚರಿಸಲ್ಪಡುತ್ತಿದೆ.
ಎತ್ತು ಮತ್ತು ಮಣ್ಣನ್ನು ಪೂಜೆಸಿದರೆ ಮಳೆ-ಬೆಳೆಗಳು ಚೆನ್ನಾಗಿ ಬರುತ್ತವೆ ಎಂಬ ನಂಬಿಕೆ ರೈತರ ಬಾಂಧವರಲ್ಲಿ ಹಿಂದಿನಿಂದಲೂ ಇದೆ. ಇಂದಿನ ಆಧುನಿಕತೆ ಸ್ಪರ್ಶದಿಂದಾಗಿ ಮಣ್ಣೆತ್ತಿನ ಬದಲಾಗಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಪ್ಯಾರಿಸ್ ಆಫ್ ಪ್ಲಾಸ್ಟರ್ನಿಂದ ತಯಾರಿಸಿದ ಎತ್ತುಗಳ ಮಾರಾಟದ ಭರಾಟೆ ಕಂಡುಬರುತ್ತಿದೆ. ಮುಂಬರುವ ದಿನಗಳಲ್ಲಿ ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣೆತ್ತು ಕಾಣಸಿಗುವದಿಲ್ಲವೇನೋ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಣ್ಣೆತ್ತು ಜೊತೆಗೆ ಮಾರುಕಟ್ಟೆಯಲ್ಲಿ ಕೊಲ್ಹಾಪುರದಿಂದ ತರಿಸಿರುವ ಪ್ಯಾರಿಸ್ ಆಪ್ ಪ್ಲಾಸ್ಟರ್ನಿಂದ ತಯಾರಿಸಿದ ಬಣ್ಣ ಬಣ್ಣದ ಎತ್ತುಗಳು ಬುಧವಾರ ಮಾರಾಟ ಮಾಡುವದು ಕಂಡು ಬಂದಿತ್ತು. ಇದರ ಜೊತೆಗೆ ಕಟ್ಟಿಗೆಯಿಂದ ತಯಾರಿಸಿದ ಅಲಂಕಾರಿಕ ಚಕ್ಕಡಿ ಸಹ ಮಾರಾಟ ಆಗುತ್ತಿರುವದು ಕಂಡುಬಂದಿತ್ತು.
ಮಣ್ಣೆತ್ತಿನ ಅಮವಾಸ್ಯೆ ದಿನದಂದು ಪೂಜೆಗೆ ಅಗತ್ಯವಿರುವ ಮಣ್ಣೆತ್ತುಗಳನ್ನು ವಿತರಣೆ ಮಾಡುವದಕ್ಕಾಗಿ ಪಟ್ಟಣದ ಕುಂಬಾರರ ಮನೆಗಳಲ್ಲಿ ಎತ್ತುಗಳ ತಯಾರಿಕೆಗೆ ಬೇಕಾದ ಮಣ್ಣು ಸೇರಿದಂತೆ ಇತರ ವಸ್ತುಗಳನ್ನು ಸಂಗ್ರಹಿಸಿಕೊಂಡು ಕಳೆದ ಹದಿನೈದು ದಿನಗಳಿಂದ ಕುಟುಂಬ ಸದಸ್ಯರೊಂದಿಗೆ ಮಣ್ಣೆತ್ತು ತಯಾರಿಕೆಯಲ್ಲಿ ತಲ್ಲೀನರಾಗುತ್ತಿರುವದು ಕಡಿಮೆಯಾಗುತ್ತಿರುವದು ಕಂಡುಬರುತ್ತಿದೆ.
ಮುಂಗಾರು ಮಳೆಯೊಂದಿಗೆ ಆರಂಭವಾಗುವ ಹಬ್ಬಗಳ ಆಚರಣೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ನಿರತರಾಗುವ ರೈತ ಕುಟುಂಬದವರು ಸಂಪ್ರದಾಯದಂತೆ ಮಣ್ಣೆತ್ತಿನ ಹಬ್ಬವನ್ನು ಉತ್ಸಾಹದಿಂದ ಆಚರಣೆ ಮಾಡುತ್ತಾರೆ. ಈ ವರ್ಷ ಮುಂಗಾರು ಆರಂಭದ ಮುನ್ನವೇ ಮಳೆ ಆಗಮಿಸಿದ್ದರಿಂದಾಗಿ ರೈತ ಬಾಂಧವರು ಹರ್ಷಗೊಂಡಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ಈಗಾಗಲೇ ಬಿತ್ತನೆ ಕಾರ್ಯ ಮಾಡಿದ್ದಾರೆ. ಬಿತ್ತನೆಯಾದ ನಂತರ ಅಲ್ಪಸ್ವಲ್ಪ ಮಳೆಯಾಗಿದೆ. ಇನ್ನಷ್ಟು ಮಳೆಯಾದರೆ ಬಿತ್ತನೆ ಮಾಡಿರುವದಕ್ಕೆ ತುಂಬಾ ಅನುಕೂಲವಾಗುತ್ತದೆ ಎಂದು ರೈತ ಬಾಂಧವರು ಹೇಳುತ್ತಾರೆ.
ಅಮವಾಸ್ಯೆ ದಿನದಂದು ಜನತೆ ಕುಂಬಾರರ ಮನೆಗೆ ತೆರಳಿ ಮಣ್ಣೆತ್ತುಗಳನ್ನು ತಂದು ದೇವರ ಜಗುಲಿಯ ಮೇಲಿಟ್ಟು ಕುಟುಂಬ ಸದಸ್ಯರೊಂದಿಗೆ ಸಾಮೂಹಿಕ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ಮಣ್ಣೆತ್ತುಗಳನ್ನು ಖರೀದಿಸಿ ತಂದು ಪೂಜೆ ಮಾಡುವದು ಕಂಡುಬರುತ್ತಿದೆ.
ಪಟ್ಟಣದ ಸೇರಿದಂತೆ ತಾಲೂಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿಯೂ ದೊಡ್ಡದಾದ ಮಣ್ಣೆತ್ತುಗಳನ್ನು ಪ್ರತಿಷ್ಠಾಪನೆ ಮಾಡಿ ಐದು ದಿನಗಳವರೆಗೆ ಪೂಜೆ ಸಲ್ಲಿಸುತ್ತಾರೆ. ನಂತರ ಊರ ಮುಂದಿನ ಕೆರೆ, ಹಳ್ಳ ಬಾವಿಯಲ್ಲಿ ಮಣ್ಣೆತ್ತುಗಳನ್ನು ವಿಸರ್ಜನೆ ಕಾರ್ಯ ಸಂಭ್ರಮದಿಂದ ಮಾಡುತ್ತಾರೆ.
ಪಟ್ಟಣದ ಹಿರಿಯರಾದ ಬಸವರಾಜ ಹಾರಿವಾಳ ಅವರನ್ನು ಮಾತನಾಡಿಸಿದಾಗ ಮೊದಲು ಪಟ್ಟಣದಲ್ಲಿ ಹಿರಿಯರಾದ ಸಾಯಬಣ್ಣ ಕುಂಬಾರ, ಪರ್ವುತಪ್ಪ ಕುಂಬಾರ ಅವರು ಕಾರಹುಣ್ಣಿಮೆ ಮರುದಿನದಿಂದಲೇ ಮಣ್ಣೆತ್ತಿನ ಅಮವಾಸ್ಯೆಗೆ ಬೇಕಾದ ಮಣ್ಣೆತ್ತುಗಳನ್ನು ತಯಾರಿ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಮಣ್ಣೆತ್ತಿನ ಅಮವಾಸ್ಯೆ ದಿನ ರೈತ ಬಾಂಧವರ ಮನೆಗಳಿಗೆ ವಿತರಣೆ ಮಾಡಿ ಜೋಳ ಇಲ್ಲವೇ ಹಣ ಸಂಗ್ರಹಿಸುತ್ತಿದ್ದರು. ಇದೀಗ ಈ ಇಬ್ಬರು ವ್ಯಕ್ತಿಗಳು ಮೃತರಾಗಿದ್ದಾರೆ. ಇದೀಗ ಕುಂಬಾರ ಮನೆಗಳಲ್ಲಿ ಮಣ್ಣೆತ್ತು ತಯಾರಿಸುವುದು ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಅಮವಾಸ್ಯೆ ದಿನ ನಮ್ಮ ಮನೆಗೆ ಮೊದಲಿನಂತೆ ಯಾರೂ ಮಣ್ಣೆತ್ತುಗಳನ್ನು ಕೊಡದೇ ಇರುವದರಿಂದಾಗಿ ನಾನೇ ಮನೆಯಲ್ಲಿ ಮಣ್ಣಿನಿಂದ ಎತ್ತುಗಳನ್ನು ಮಾಡಿ ಸಂಪ್ರದಾಯದಂತೆ ಪೂಜೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಎತ್ತುಗಳ ಮಾರಾಟವಾಗುತ್ತಿರುವದು ಕಂಡುಬರುತ್ತಿದೆ. ಈ ವರ್ಷ ಉತ್ತಮ ಮಳೆಯಾಗಿರುವದರಿಂದಾಗಿ ಈಗಾಗಲೇ ಬಿತ್ತನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಮಳೆಯಾದರೆ ಬಿತ್ತನೆ ಮಾಡಿರುವುದಕ್ಕೆ ತುಂಬಾ ಅನುಕೂಲವಾಗಿ ಉತ್ತಮ ಬೆಳೆ ಬರುತ್ತದೆ ಎಂದರು.
ಶಿಕ್ಷಕ ಶಿವರಾಜ ಜಂಗಿ ಅವರು ಸಂಪ್ರದಾಯದಂತೆ ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣೆತ್ತು ಪೂಜೆ ಮಾಡುವದು ಇಂದಿನ ಜನಾಂಗಕ್ಕೆ ತಿಳಿಸಿಕೊಡುವ ಅಗತ್ಯವಿದೆ. ಮಣ್ಣೆತ್ತಿನ ಬದಲಾಗಿ ಪಿಓಪಿ ಎತ್ತುಗಳು ಮಾರಾಟಕ್ಕೆ ಬಂದಿರುವದು ಮುಂದಿನ ಜನಾಂಗಕ್ಕೆ ಮಣ್ಣೆತ್ತಿನ ಬಗ್ಗೆ ಅರಿವು ಕಡಿಮೆಯಾಗುವ ಸಾಧ್ಯತೆಯಿದೆ. ಇದು ಕಡಿಮೆಯಾಗಿ ಮಣ್ಣೆತ್ತು ಹೆಚ್ಚು ಮಾರಾಟವಾಗುವದು ತುಂಬಾ ಅಗತ್ಯವಿದೆ. ಇದರ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕೆಂದರು.
ಮಣ್ಣೆತ್ತಿನ ಅಮವಾಸ್ಯೆದಂಗವಾಗಿ ಜನರ ಬೇಡಿಕೆ ಅನುಗುಣವಾಗಿ ಬಣ್ಣ ಹಚ್ಚಿರುವ (ಪಿಓಪಿ) ಎತ್ತುಗಳನ್ನು ಕೊಲ್ಹಾಪುರ ಹಾಗೂ ಉಮರ್ಗಾದಿಂದ ಮಾರಾಟಕ್ಕೆ ತರಿಸಲಾಗಿದೆ. ಬೇರೆ ಕಡೆಯಿಂದ ತರಿಸಲಾದ ಪ್ಯಾರಿಸ್ ಆಫ್ ಪ್ಲಾಸ್ಟರ್ನಿಂದ ತಯಾರಿಸಿದ ಎತ್ತುಗಳನ್ನು ಗಾತ್ರದ ಅನುಗುಣವಾಗಿ ರೂ.೧೦೦ ರಿಂದ ೨೫೦೦ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ನನ್ನ ತಾಯಿ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಜೋಡಿಗೆ ರೂ.೫೦ ರಿಂದ ೧೦೦ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಈ ಸಲ ಕಟ್ಟಿಗೆಯಿಂದ ತಯಾರಿಸಿದ ಸುಂದರವಾದ ಚಕ್ಕಡಿಗಳನ್ನು ಮಾರಾಟಕ್ಕೆ ತಂದಿದ್ದೇನೆ ಎಂದು ಗದಿಗೆಪ್ಪ ಕುಂಬಾರ ಹೇಳಿದರು.

