ವಿಜಯಪುರ: ಜಿಲ್ಲೆಯ ಕೃಷ್ಣಾ ನದಿಯಲ್ಲಿ ಭೀಕರ ಘಟನೆ ನಡೆದಿದೆ. ಜೂಜು ಆಡುತ್ತಿದ್ದ ವೇಳೆ ಪೊಲೀಸರು ದಾಳಿಯಿಂದ ತಪ್ಪಿಸಿಕೊಳ್ಳಲು ತೆಪ್ಪದಲ್ಲಿ ಪರಾರಿಯಾಗುವ ವೇಳೆ ಘೋರ ದುರ್ಘಟನೆ ನಡೆದಿದೆ. ಐವರು ಜಲ ಸಮಾಧಿಯಾಗಿದ್ದು, ಮೂವರು ಪಾರಾಗಿದ್ದಾರೆ.
ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಹೊರ ಭಾಗದ ಕೃಷ್ಣಾ ನದಿ ತಟದಲ್ಲಿ ಮಂಗಳವಾರ ಐವರು ಜಲಸಮಾಧಿಯಾಗಿದ್ದಾರೆ.
ನದಿ ತಟದಲ್ಲಿ ಎಂಟು ಜನರ ತಂಡ ಇಸ್ಪೀಟ್ ಆಟವಾಡುತ್ತಿದ್ದ ವೇಳೆ ಕೊಲ್ಹಾರ ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ತಡ ಪರಾರಿಯಾಗಲು ಯತ್ನಿಸಿದ್ದಾರೆ. ಅಲ್ಲೇ ಹತ್ತಿರದಲ್ಲಿ ತೆಪ್ಪದಲ್ಲಿ ಪಾರಾಗಲು ಯತ್ನಿಸಿದ್ದಾರೆ. ಆದರೆ ಅವರ ದುರಾದೃಷ್ಟ ನದಿ ಮಧ್ಯೆದಲ್ಲೇ ತೆಪ್ಪ ಮುಗುಚಿ ಬಿದ್ದಿದೆ. ಜೋರಾದ ಗಾಳಿಯಿಂದಾಗಿ ತೆಪ್ಪದ ನಿಯಂತ್ರಣ ತಪ್ಪಿದ್ದು, ಎಂಟು ಜನ ನೀರು ಪಾಲಾಗಿದ್ದಾರೆ. ಈ ಮೂವರು ಜೀವ ಉಳಿಸಿಕೊಂಡಿದ್ದು, ಉಳಿದವರು ಜಲ ಸಮಾಧಿಯಾಗಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡ ಸಹ ಕತ್ತಲಾಗಿದ್ದ ಕಾರಣ ಹಾಗೂ ಅತೀಯಾದ ಗಾಳಿಯಿಂದಾಗಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸದ್ಯ ಮೂರು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ತೆಪ್ಪದಲ್ಲಿದ್ದ ಒಟ್ಟು ಎಂಟು ಜನರ ಪೈಕಿ ಸಚಿನ್ ಕಟಬರ ಈಜಿ ದಡ ಸೇರಿದ್ದಾನೆ. ಫಾರುಖ ಫತ್ತೇಮಹದ್ ಎಂಬಾತನನ್ನು ಸ್ಥಳಿಯರು ರಕ್ಷಣೆ ಮಾಡಲಾಗಿದೆ. ಬಶೀರ್ ಹೊನವಾಡ ಕೂಡಾ ಇಂದು ಮನೆ ಸೇರಿದ್ದಾನೆ.
ಸದ್ಯ ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ ಶವ ಈಗಾಗಲೇ ಹೊರ ತೆಗೆಯಲಾಗಿದೆ. ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲೀಕಾರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಸದ್ಯ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನಿಬ್ಬರಿಗಾಗಿ ನದಿಯಲ್ಲಿ ಹುಡುಕಾಟ ನಡೆದಿದೆ.
ಮೃತರ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಇನ್ನು ಘಟನೆಯಲ್ಲಿ ಮೃತಪಟ್ಟವರದ್ದು, ಒಬ್ಬೊಬ್ಬರದ್ದು ಒಂದೊಂದು ಕಥೆ. ತೈಯಬ್ ಚೌಧರಿ ಮೆಣಸಿಕಾಯಿ ಮಾರಾಟ ಮಾಡಿ ರೂ.85 ಸಾವಿರ ಹಣ ತೆಗೆದುಕೊಂಡು ಹೋಗಿ ಇಸ್ಪೀಟ್ ಆಡಿ ದಾರುಣ ಸಾವನಪ್ಪಿದ್ದಾನೆ. ಮೃತ ಮೆಹಬೂಬ ಮನೆಯಲ್ಲಿ ಕೂಡಾ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಪೊಲೀಸರು ಬೆನ್ನು ಹತ್ತಿದ್ದರು, ಅವರಿಂದ ತಪ್ಪಿಸಿಕೊಳ್ಳಲು ಹೋದಾಗ ಘಟನೆ ನಡೆದಿದೆ. ಇದು ಆಗಬಾರದಿತ್ತು, ಆಗಿಬಿಟ್ಟಿದೆ. ಪೊಲೀಸರು ಬೆನ್ನು ಹತ್ತಿರದಿದ್ದರೆ ಅವರು ಉಳಿತಾ ಇದ್ರು ಎಂದು ಮೃತರ ಕುಟುಂಬಸ್ತರು ಕಣ್ಣೀರು ಹಾಕಿದ್ದಾರೆ.

