ಹಾಸ್ಟೇಲ್ ಪ್ರವೇಶಾತಿ ವಿಳಂಬ ಹಾಗೂ ವಿದ್ಯಾರ್ಥಿ ವೇತನ ಬಿಡುಗಡೆಗೆ ಸರ್ಕಾರಕ್ಕೆ ಆಗ್ರಹ

ವಿಜಯಪುರ: ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರಿಗೆ ಬುಧವಾರ ಪ್ರತಿಭಟನೆ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು.
ಮನವಿ ಸಮಯದಲ್ಲಿ ವಿದ್ಯಾರ್ಥಿಗಳ ಮತ್ತು ಪೊಲೀಸ್ ನಡುವೆ ನೂಕು-ತಳ್ಳಾಟ ನಡೆಯಿತು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ಗ್ರಾಮೀಣ ಭಾಗದಿಂದ ಬಡ ಮತ್ತು ಪ್ರತಿಭಾವಂತ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಬೇಕೆಂಬ ಆಶಯವನ್ನ ಇಟ್ಟುಕೊಂಡು ನಗರ ಪ್ರದೇಶಗಳಿಗೆ ಬರುತ್ತಾರೆ, ಆ ವಿದ್ಯಾರ್ಥಿಗಳಿಗೆ ಸರ್ಕಾರಗಳು ಮೂಲಭೂತ ಸೌಲಭ್ಯಗಳನ್ನ ಒದಗಿಸುವುದು ಆದ್ಯ ಕರ್ತವ್ಯವಾಗಿದೆ, ಆದರೆ ಕರ್ನಾಟಕ ರಾಜ್ಯದಲ್ಲಿ ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾದ ಮೂರು ತಿಂಗಳಗಳ ವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುತ್ತಿಲ್ಲ, ಜೂನ್ ತಿಂಗಳಲ್ಲಿ ಶಾಲೆ- ಕಾಲೇಜುಗಳು ಪ್ರಾರಂಭವಾದರೂ ಸಹಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುವುದರಲ್ಲಿ ಸಪ್ಟಂಬರ್ ವರೆಗೂ ತಲುಪುವ ಹಂತವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡುತ್ತಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಮೂರು ತಿಂಗಳುಗಳ ಕಾಲ ಎಲ್ಲಿ ಉಳಿದುಕೊಂಡು ಶಿಕ್ಷಣವನ್ನ ಪಡೆಯಬೇಕು ಎಂಬುವ ಸಾಮಾನ್ಯ ಜ್ಞಾನವು ಸರ್ಕಾರಗಳಿಗೆ ಇಲ್ಲದಂತಾಗಿದೆ, ರಾಜ್ಯ ಸರ್ಕಾರ ಕೂಡಲೇ ಈ ವರ್ಷದ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಕಲ್ಪಿಸಬೇಕೆಂದು ಆಗ್ರಹಪಡಿಸಿದರು.
ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ ಮಾತನಾಡಿ, ಹಾಸ್ಟೆಲಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ೪೦% ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳನ್ನ ಕಲ್ಪಿಸಿಕೊಡುವ ವ್ಯವಸ್ಥೆ ಈಗ ನಮ್ಮ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಿದೆ, ಆದರೆ ಇನ್ನುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ವಂಚಿತರಾಗಿ ತಮ್ಮ ಉನ್ನತ ಶಿಕ್ಷಣವನ್ನ ಪಡೆಯಲು ಕಷ್ಟಕರವಾಗುತ್ತಿದೆ, ಸರ್ಕಾರ ಕೂಡಲೇ ಹಾಸ್ಟೆಲಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿಶೇಷ ಅನುದಾನವನ್ನ ನೀಡಿ ಹಾಸ್ಟೆಲಗಳ ಸಂಖ್ಯೆಗಳನ್ನ ಹೆಚ್ಚಳ ಮಾಡಬೇಕು ಹಾಗೂ ಈಗಿರುವ ಹಾಸ್ಟೆಲಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಂತೆ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಾ ಸಂಚಾಲಕ ಸಂದೀಪ ಅರಳಗುಂಡಗಿ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ನಂಬಿ ಶಿಕ್ಷಣವನ್ನ ಪಡೆಯುತ್ತಿದ್ದಾರೆ, ತಮ್ಮ ಶಿಕ್ಷಣಕ್ಕೆ ಸರ್ಕಾರಗಳು ನೀಡುವ ವಿದ್ಯಾರ್ಥಿವೇತನ ಸಹಕಾರಿಯಾಗಲಿದೆ ಎಂಬ ಭಾವನೆಯೊಂದಿಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿವೇತನ ಜಮೆಯಾಗದೆ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದು, ವಿದ್ಯಾಸಿರಿ ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗದೇ ಇರುವುದು, ರೈತ ವಿದ್ಯಾರ್ಥಿನಿಧಿಯನ್ನ ರದ್ದುಗೊಳಿಸಿರುವುದು, ಹಾಗೂ ಇನ್ನುಳಿದ ವಿದ್ಯಾರ್ಥಿ ವೇತನವು ಸರಿಯಾಗಿ ವಿದ್ಯಾರ್ಥಿಗಳಿಗೆ ಜಮೆ ಮಾಡದೆ ವಿದ್ಯಾರ್ಥಿ ವಿರೋಧಿ ನೀತಿಯನ್ನ ಅನುಸರಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ತಕ್ಷಣವೇ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಮಲ್ಲಿಕಾರ್ಜುನ ಮಾಳಿ, ಸುಜ್ಞಾತಾ ಕುಲಕರ್ಣಿ, ಕವಿತಾ ಬಿರಾದಾರ,ಸ್ನೇಹಾ ಚವ್ಹಾಣ, ಐಶ್ವರ್ಯ ಆಸಂಗಿ, ಸ್ನೇಹಾ, ಶಿಲ್ಪಾ ಪೂಜಾರಿ, ಆರತಿ, ಶಿವನಗೌಡ ಬಿರಾದಾರ, ಶ್ರೀಕಾಂತ ರೆಡ್ಡಿ, ಪ್ರವೀಣ ಬಿರಾದಾರ, ಮಹಾಂತೇಶ ತಳವಾರ, ಅಭಿಷೇಕ ಬಿರಾದಾರ, ವಿನಾಯಕ, ಸೋಮು, ರವಿ ಹಿಪ್ಪರಗಿ, ಅಭಿಷೇಕ ಬಡಿಗೇರ, ಚಂದನಕೋಳಿ, ಬಸವರಾಜ ಬಿಜ್ಜರಗಿ, ಚೇತನ, ಶಿವಾಜಿ, ಶ್ರೀಕಾಂತ, ಅನೀಲ ನಾಯ್ಕೋಡಿ, ಚಂದ್ರಕಾಂತ ಹೂಗಾರ, ಅಜೀತ ಇನ್ನಿತರರು ಉಪಸ್ಥಿತರಿದ್ದರು.

