ರೂ.೧.೨೫ ಕೋಟಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ಮನಗೂಳಿ ಅಭಿಮತ
ಸಿಂದಗಿ: ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿದೆ. ಆ ನಿಟ್ಟಿನಲ್ಲಿ ಸಿಂದಗಿಯ ಪ್ರಮುಖ ರಸ್ತೆಗಳನ್ನು ಅಭಿವೃದ್ದಿ ಪಡಿಸಿ ಸಿಂದಗಿ ನಗರವನ್ನು ಅತ್ಯಂತ ಸುಂದರ ನಗರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಬಳಿ ಮಂಗಳವಾರ ಲೋಕಪಯೋಗಿ ಇಲಾಖೆ, ಉಪ ವಿಭಾಗ ಸಿಂದಗಿಯ ೨೦೨೩-೨೪ ನೇ ಸಾಲಿನ ೩೦೫೪- ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ಯೋಜನೆ ಅಡಿಯಲ್ಲಿ ಸಿಂದಗಿ ಪಟ್ಟಣದ ವ್ಯಾಪ್ತಿಯ ಜೇವರ್ಗಿ-ಚಿಕ್ಕೋಡಿ ರಸ್ತೆ ಹಾಗೂ ಆಲಮೇಲ-ಸಿಂದಗಿ ರಸ್ತೆ (ಮಹಾತ್ಮಾ ಗಾಂಧಿ ವೃತ್ತದಿಂದ) ರಾಷ್ಟ್ರೀಯ ಹೆದ್ದಾರಿ-೫೦ರವರೆಗೆ, ಚಿಕ್ಕಸಿಂದಗಿ ವರ್ತುಲ ರಸ್ತೆಯವರೆಗೆ ಬಾಕಿ ಉಳಿದಿರುವ ರಸ್ತೆಗೆ ಮೀಡಿಯನ್ ಅಳವಡಿಸುವ ಕಾಮಗಾರಿಗೆ ಅಂದಾಜು ೧.೨೫ ಕೋಟಿ ಅನುದಾನದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರ ಅಭಿವೃದ್ದಿಯಾಗಲು ಮೊದಲು ರಸ್ತೆಗಳು ಉತ್ತಮವಾಗಿರಬೇಕು. ಮುಂಬರುವ ದಿನಗಳಲ್ಲಿ ಸಿಂದಗಿಗೆ ಕೂಡುವ ಎಲ್ಲ ರಸ್ತೆಗಳನ್ನು ಹಾಗೂ ಪಟ್ಟಣದ ಮುಖ್ಯ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಪ್ರಸ್ತುತ ನಿರ್ಮಾಣಗೊಳ್ಳಲಿರುವ ರಸ್ತೆಗೆ ಮೀಡಿಯನ್ ನಿರ್ಮಾಣವಾದ ಬಳಿಕ ಅಲ್ಲಿ ಸುಂದರವಾದ ಗಿಡಗಳನ್ನು ನೆಡುವ ಕಾರ್ಯ ಆರಂಭಗೊಳ್ಳಲಿದೆ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡ ಗೋಲ್ಲಾಳಪ್ಪಗೌಡ ಮಾಗಣಗೇರಿ ಅವರು ಮಾತನಾಡಿ, ಸಿಂದಗಿ ಪಟ್ಟಣದ ಅಭಿವೃದ್ಧಿಗೆ ಸದಾ ಕಂಕಣ ಬದ್ದರಾಗಿರುವ ಶಾಸಕ ಅಶೋಕ ಮನಗೂಳಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಪಟ್ಟಣದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಈ ವೇಳೆ ಲೋಕಪಯೋಗಿ ಇಲಾಖೆಯ ಅಧಿಕಾರಿ ಅರುಣಕುಮಾರ ವಡಗೇರಿ, ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಚನ್ನಪ್ಪ ಗೊಣಿ, ಸದಾನಂದ ಕುಂಬಾರ, ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ, ಅಬ್ದುಲರಹೀಮ ದುದನಿ, ಮಾಜಿ ಸದಸ್ಯ ಮಂಜುನಾಥ ಬಿಜಾಪೂರ, ಶಾಂತಪ್ಪ ರಾಣಾಗೋಳ, ಲಕ್ಷ್ಮೀಕಾಂತ ಸೂಡಿ, ಜಾಂಗೀರ ಸಿಂದಗಿಕರ, ನೂರಅಹ್ಮದ ಅತ್ತಾರ, ಪ್ರವೀಣ ಹಾಲಹಳ್ಳಿ, ಪರಮಾನಂದ ಬಗಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

