ಆಲಮಟ್ಟಿ: ಯಾವುದೇ ಮನೆ, ಮಠ, ದೇಗುಲಗಳಲ್ಲಿ ಪೂಜೆಗೆ ಸೀಮಿತವಾಗಿ ನಶಿಸುತ್ತಿದ್ದ ೧೨ ನೇ ಶತಮಾನದ ಶರಣರು ತಾಡೋಲೆಗಳಲ್ಲಿ ರಚಿಸಿದ್ದ ವಚನಗಳನ್ನು ಸಂಗ್ರಹಿಸಿ, ಸಂಶೋಧಿಸಿ ಕೃತಿ ಸಂಪುಟಗಳಲ್ಲಿ ಹೊರ ತಂದ ಡಾ ಫ.ಗು. ಹಳಕಟ್ಟಿ ಅವರು ಜೀವನದುದ್ಧಕ್ಕೂ ಸರಳ ಫಕೀರನಂತೆ ಬದುಕು ಸಾಗಿಸಿದರು ಎಂದು ಸಾಹಿತಿ ಮೋಹನ ಕಟ್ಟಿಮನಿ ಅಭಿಪ್ರಾಯಪಟ್ಟರು.
ಆರ್‌ಬಿಪಿಜಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ನಿಡಗುಂದಿ ತಾಲ್ಲೂಕು ಆಡಳಿತ ವಚನ ಪಿತಾಮಹ ಡಾ ಫ.ಗು. ಹಳಕಟ್ಟಿ ಅವರ ೧೪೪ ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ವಚನ ಸಂರಕ್ಷಣಾ ದಿನದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.
ಹುಟ್ಟಿದ ಆರಂಭದಿಂದ ೮೩ ವರ್ಷಗಳಕಾಲ ನಿರಂತರವಾಗಿ ತಮ್ಮ ಸುಖವನ್ನು ಬಯಸದೆ ವಚನ ಸಾಹಿತ್ಯದ ಸಂಶೋಧನೆಗಾಗಿ ಜೀವನವನ್ನೇ ಸವೆದ ಮಹಾಪುರುಷನ ಜನ್ಮ ದಿನವನ್ನು ಸರಕಾರ ಆಚರಣೆ ಮಾಡಬೇಕಾದರೆ ೧೩೦ ವರ್ಷ ತೆಗೆದುಕೊಂಡಿತು ಅದೇ ನಮ್ಮ ದುರ್ದೈವ.ಎಂದು ವಿಷಾಧಿಸಿದರು.
ಬಿಎಲ್‌ಡಿಎ ಶಿಕ್ಷಣ ಸಂಸ್ಥೆ ಮತ್ತು ಸಿದ್ದೇಶ್ವರ ಬ್ಯಾಂಕ್ ಸ್ಥಾಪಿಸಿದ ಹಳಕಟ್ಟಿಯವರು ಲಿಂಗೈಕ್ಯರಾಗಿದ್ದಾಗ ಅವರ ಸಮಾಧಿಗಾಗಿ ಯಾರೂ ಜಾಗ ನೀಡಲಿಲ್ಲ, ಕೊನೆಗೆ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ತಾವು ರಚಿಸಿದ ಗ್ರಂಥ ಮಾರಾಟ ಮಾಡಿ ಹಳಕಟ್ಟಿಯವರ ಸಮಾಧಿ ಅಭಿವೃದ್ಧಿಗೊಳಿಸಿದರು ಎಂದರು.
ಬಿಎಲ್ ಡಿಎ ಸಂಸ್ಥೆ ಸ್ಥಾಪಿಸಿ ೧೦ ಕ್ಕೂ ಹೆಚ್ಚು ಕನ್ನಡ ಶಾಲೆ ಆರಂಭಿಸಿದರು. ಮುಚ್ಚುತ್ತಿದ್ದ ಬಾಸೆಲ್ ಮಿಷನ್ ಆಂಗ್ಲಮಾಧ್ಯಮ ಶಾಲೆಯನ್ನು ಬಿಎಲ್ ಡಿಎ ಸಂಸ್ಥೆಗೆ ಪಡೆದುಕೊಂಡರು. ಆ ಕಾಲದಲ್ಲಿ ಕಾನೂನು ಪದವಿ ಪಡೆದಿದ್ದರೂ ಇವರ ಕುಟುಂಬ ಅನೇಕ ಬಾರಿ ಊಟಕ್ಕೂ ಪರದಾಡಿತ್ತು ಎಂದರು.
ತಹಶೀಲ್ದಾರ್ ಎ.ಡಿ. ಅಮರವಾಡಗಿ ಮಾತನಾಡಿ, ಈಗಿನ ಪೀಳಿಗೆಗೆ ಶರಣರ ವಚನಗಳನ್ನು ನೀಡಲು ಶ್ರಮಿಸಿದ ಫ.ಗು. ಹಳಕಟ್ಟಿ ಜಯಂತಿಯನ್ನು ವಚನ ಸಂರಕ್ಷಣಾ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಜಿ.ಎಂ. ಕೋಟ್ಯಾಳ ಪ್ರತಿಯೊಬ್ಬ ವಿದ್ಯಾರ್ಥಿಯೂ ಡಾ.ಫ.ಗು.ಹಳಕಟ್ಟಿಯವರ ಬಗ್ಗೆಯಾಗಲಿ ಹರ್ಡೇಕರ್ ಮಂಜಪ್ಪನವರ ಬಗ್ಗೆಯಾಗಲಿ ಎಷ್ಟು ಸಾದ್ಯವೋ ಅಷ್ಟು ಕೃತಿಗಳನ್ನು ಕೇಳಿ ನಾವು ತಿಳಿದುಕೊಂಡು ಮುಂದಿನ ಪೀಳಿಗೆಗೆ ಅವರ ಚರಿತ್ರೆ ಹೋಗಬೇಕು. ಬಿಜಾಪುರ ಜಿಲ್ಲೆಯನ್ನು ಅವರ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಜೀವನದ ಉಸಿರಿರುವರೆಗೂ ದುಡಿದಂತಹ ಇವರಿಬ್ಬರ ಹೆಸರನ್ನು ಹೇಳೋದೆ ನಮ್ಮ ಭಾಗ್ಯ ಎಂದರು.
ಪ್ರಾಚಾರ್ಯ ಪಿ.ಎ. ಹೇಮಗಿರಿಮಠ, ಯು.ಎ.ಬಶೆಟ್ಟಿ, ಮಂಜುನಾಥ ಹಿರೇಮಠ, ಬಿ.ಎಸ್. ಅವಟಿ, ಬಿ.ಎಸ್. ಯರವಿನತೆಲಿಮಠ, ಎಸ್.ಐ.ಗಿಡ್ಡಪ್ಪಗೋಳ, ಎನ್.ಎಸ್. ಬಿರಾದಾರ, ಐ.ಎಲ್. ಶಿಂಧೆ, ರಾಜಕುಮಾರ ರಾಠೋಡ, ತನುಜಾ ಪೂಜಾರಿ, ಬಿ.ಡಿ. ಚಲವಾದಿ ಇದ್ದರು.
ತಾಲ್ಲೂಕಿನ ನಾನಾ ಪ್ರೌಢಶಾಲೆಗಳಲ್ಲಿ ಫ.ಗು. ಹಳಕಟ್ಟಿ ಕುರಿತು ಏರ್ಪಡಿಸಿದ್ದ ಭಾಷಣ, ವಚನ ಕಂಠಪಾಠ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
Subscribe to Updates
Get the latest creative news from FooBar about art, design and business.
ವಚನ ಸಾಹಿತ್ಯ ಸಂಶೋಧನೆಗೆ ಜೀವನವನ್ನೇ ಸವೆದ ಮಹಾಪುರುಷ ಡಾ.ಹಳಕಟ್ಟಿ
Related Posts
Add A Comment

