ಬಸವನಬಾಗೇವಾಡಿ: ಡಾ.ಫ.ಗು.ಹಳಕಟ್ಟಿ ಅವರು ೧೨ ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಕ್ಷರಣೆ ಮಾಡಿದ್ದು ಸದಾ ಸ್ಮರಣೀಯವಾಗಿದೆ. ಇವರು ವಚನ ಸಾಹಿತ್ಯ ಸಂರಕ್ಷಣೆ ಮಾಡಿದ್ದರಿಂದಲೇ ಇಂದು ನಾವೆಲ್ಲರೂ ವಚನ ಸಾಹಿತ್ಯವನ್ನು ಓದುತ್ತಿದ್ದೇವೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ವಚನ ಸಾಹಿತ್ಯ ಸಂರಕ್ಷಣೆಗಾಗಿ ಡಾ.ಹಳಕಟ್ಟಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಈ ಮೂಲಕ ಅವರು ಜಗತ್ತಿಗೆ ವಚನಸಾಹಿತ್ಯವನ್ನು ಉಳಿಸಿದ್ದಾರೆ. ಸರ್ಕಾರವು ಇವರ ಜಯಂತಿ ದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸಬೇಕೆಂದು ಆದೇಶ ಹೊರಡಿಸಿದೆ. ವಚನ ಸಾಹಿತ್ಯದಲ್ಲಿರುವ ಸಂದೇಶಗಳನ್ನು ಅರಿತು ಮುನ್ನೆಡೆದರೆ ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದರು.
ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ ಮಾತನಾಡಿ, ವಚನ ಸಾಹಿತ್ಯವನ್ನು ನಮ್ಮ ಸಾರಸ್ವತ ಲೋಕಕ್ಕೆ ಡಾ.ಫ.ಗು.ಹಳಕಟ್ಟಿ ಕೊಡುಗೆಯಾಗಿ ನೀಡಿದ್ದಾರೆ. ಅವರು ಸಂಕಷ್ಟದ ಬದುಕಿನಲ್ಲಿಯೂ ವಚನ ಸಾಹಿತ್ಯವನ್ನು ಪ್ರಚಾರ, ಸಂರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇವರು ಸರ್ಕಾರಿ ವಕೀಲರಾಗಿ ಸೇವೆ ಮುಂದುವರಿಸಿದ್ದರೆ ಮುಂದೆ ಅವರು ಸುಪ್ರಿಂಕೋರ್ಟ್ ನ್ಯಾಯಾಽಶರಾಗುತ್ತಿದ್ದರು ಎಂದು ಗಜೇಂದ್ರ ಗಡಕರ್ ಅವರು ಹೇಳಿದ್ದಾರೆ. ಅವರು ವಕೀಲ ವೃತ್ತಿ ತ್ಯಜಿಸಿ ವಚನ ಸಾಹಿತ್ಯ ಪ್ರಚಾರ, ಸಂರಕ್ಷಣೆಗೆ ಮುಂದಾದರು. ಇಂತಹ ಮಹನೀಯರು ಸಂರಕ್ಷಿಸಿದ ವಚನ ಸಾಹಿತ್ಯವನ್ನು ಅರಿತು ಅದರಂತೆ ನಾವೆಲ್ಲರೂ ನಡೆಯಬೇಕಿದೆ ಎಂದರು.
ನಿವೃತ್ತ ಉಪನ್ಯಾಸಕ ಎಚ್.ಎಸ್.ಬಿರಾದಾರ ಅವರು ಡಾ.ಫ.ಗು.ಹಳಕಟ್ಟಿ ಅವರು ಅನೇಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅನೇಕ ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಡಾ.ಫ.ಗು.ಹಳಕಟ್ಟಿ ಅವರ ಜೀವನ ಸಾಧನೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಫ್.ಡಿ.ಮೇಟಿ, ಎಸ್.ಕೆ.ಸೋಮನಕಟ್ಟಿ, ನಿವೃತ್ತ ಪ್ರಾಚಾರ್ಯ ಸುರೇಶಗೌಡ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಎಸ್.ಐ.ಡೋಣೂರ, ಬಸಪ್ಪ ಬೇವನೂರ, ಬಸಪ್ಪ ಜಾಡರ, ಬಸವರಾಜ ಪಟ್ಟಣಶೆಟ್ಟಿ, ಎಸ್.ಬಿ.ತಳವಾರ, ಶ್ರೀಶೈಲ ಕೋಲಕಾರ, ಬಸಪ್ಪ ಕನ್ನೊಳ್ಳಿ, ಬಿ.ಎಸ್.ಪಟ್ಟಣದ, ಕೆ.ಬಿ.ಕಡೆಮನಿ,ಎಸ್.ಎ.ದೇಗಿನಾಳ, ಎಂ.ಎಸ್.ಪತ್ತಾರ, ಸಿಆರ್ಸಿ ಬಸವರಾಜ ಚನ್ನಗೊಂಡ, ತಹಸೀಲ್ದಾರ ಸಿಬ್ಬಂದಿ, ಇತರರು ಇದ್ದರು.
ಎಸ್.ಎಲ್.ಓಂಕಾರ ಪ್ರಾರ್ಥಿಸಿದರು. ಎಂ.ಜಿ.ಆದಿಗೊಂಡ ಸ್ವಾಗತಿಸಿ, ನಿರೂಪಿಸಿದರು. ಶ್ರೀಶೈಲ ಶಿರಗುಪ್ಪಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

