ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ
ವಿಜಯಪುರ: ದಾರ್ಶನಿಕರ ಜನ್ಮದಿನಾಚರಣೆಯನ್ನು ಜಿಲ್ಲಾಡಳಿತ ಅರ್ಥಪೂರ್ಣವಾಗಿ ಆಯೋಜಿಸಿ, ಅವರ ಸಾರ್ಥಕ ಸಾಧನೆಯನ್ನು ಅವರ ಜೀವನ ಮೌಲ್ಯವನ್ನು ವಿಚಾರಗಳನ್ನು ಯುವಪೀಳಿಗೆ ಅರಿತುಕೊಳ್ಳಬೇಕು ಎಂದು ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ವಿ.ಡಿ. ಐಹೊಳ್ಳಿ, ೧೨ನೇ ಶತಮಾನದ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿಕೊಟ್ಟು, ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರ ಕಾರ್ಯ ನಿರ್ವಹಿಸಿದ ದಾರ್ಶನಿಕ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಕಾರ್ಯ ಅನನ್ಯವಾಗಿದೆ ಎಂದರು.
ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವುದರಲ್ಲಿ ಹಳಕಟ್ಟಿಯವರ ಹೆಸರು ಅಜರಾಮರವಾಗಿದೆ. ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬಿ.ಎಲ್.ಡಿ.ಇ ಸಂಸ್ಥೆ, ಸಿದ್ದೇಶ್ವರ ಬ್ಯಾಂಕನ್ನು ಸ್ಥಾಪಿಸಿದರು. ೧೯೨೬ ರಲ್ಲಿಯೇ ಕನ್ನಡ ಶಾಲೆಗಳನ್ನು ಸ್ಥಾಪಿಸಿ, ಶಿಕ್ಷಣಕ್ಕಾಗಿ ಅಹರ್ನಿಶಿ ಶ್ರಮಿಸಿದರು ಎಂದ ಅವರು, ಶಿವಾನುಭವ ತ್ರೈಮಾಸಿಕ ಪತ್ರಿಕೆ ಪ್ರಾರಂಭಿಸಿದ ಅವರು, ಅಮೂಲ್ಯ ವಚನ ಸಾಹಿತ್ಯ ದಾಖಲೆಗಳನ್ನು ಸಂಗ್ರಹಿಸಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಸವರಾಜ ಯಲಗಾರ, ವಿಜಯಪುರ ತಹಶೀಲ್ದಾರ್‌ರಾದ ಶ್ರೀಮತಿ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಜಿಲ್ಲಾ ಪಂಚಾಯತ್‌ನ ಸಹಾಯಕ ಕಾರ್ಯದರ್ಶಿ ಶ್ರೀಮತಿ ಅನಸೂಯಾ ಚಲವಾದಿ, ಬೀಮರಾಯ ಜಿಗಜಿಣಗಿ, ವಿ.ಸಿ. ನಾಗಠಾಣ, ಬಿ.ಎಂ. ನೂಲವಿ, ಬಸವರಾಜ ಬೀಳಗಿ, ಅಡಿವೆಪ್ಪಾ ಸಾಲಗಲ್, ಎ.ಬಿ. ಅಂಕದ, ಎಸ್.ಜಿ. ಸುರಪೂರ, ದೇವೆಂದ್ರ ಮೇರೆಕರ್ ಮತ್ತಿತರರು ಉಪಸ್ಥಿತರಿದ್ದರು.
ಬಹುಮಾನ ವಿತರಣೆ:
ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕçತಿ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸಂತ ಜೋಸೆಫ್ ಶಾಲೆಯ ಅಪೂರ್ವ ಬಳಗಾರ ಪ್ರಥಮ ಸ್ಥಾನ, ಜಲನಗರದ ಗರ್ಲ್ಸ ಹೈಸ್ಕೂಲಿನ ಅನ್ನಪೂರ್ಣ ಪೂಜಾರಿ ದ್ವೀತಿಯ ಸ್ಥಾನ, ಕರ್ನಾಟಕ ಪಬ್ಲಿಕ್ ಶಾಲೆಯ ಕುಮಾರಿ ಸ್ನೇಹ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ಕುಮಾರಿ ಸಾಕ್ಷಿ ಹಿರೇಮಠ ತಂಡದಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.
ಎಚ್.ಎ. ಮಮದಾಪೂರ ಕಾರ್ಯಕ್ರಮ ನಿರೂಪಿಸಿದರು.

