ವಿಜಯಪುರ: ನಂಬಿ ಬಂದ ರೋಗಿಗಳನ್ನು ಆರೈಕೆ ಮಾಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕ. ನಮ್ಮೆಲ್ಲರ ಆರೋಗ್ಯವನ್ನು ಸುಸ್ಥಿರವಾಗಿರಿಸಿ, ಸುಂದರ ಆರೋಗ್ಯಪೂರ್ಣ ಸಮಾಜದ ನಿರ್ಮಾತೃಗಳೇ ವೈದ್ಯರು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದಲ್ಲಿ ಸೋಮವಾರ ಸಂಜೆ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ವೈದ್ಯ ಡಾ.ಮೋಹನ ಎಂ ಭೋಸಲೆ ಅವರ ಸನ್ಮಾನ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಓರ್ವ ಆದರ್ಶ ವೈದ್ಯ ತನ್ನ ಕುಟುಂಬದ ನೋವು ನಲಿವುಗಳನ್ನು ಬದಿಗಿರಿಸಿ ರೋಗಿಯನ್ನು ಗುಣಪಡಿಸುವ ರೀತಿ ನಿಜಕ್ಕೂ ಅತ್ಯುದ್ಭುತ. ಪ್ರೀತಿ ತುಂಬಿದ ಮಾತುಗಳಿಂದ ರೋಗಿಗಳಲ್ಲಿ ಆಪ್ತ ಸಂಜೀವಿನಿಯಂತೆ, ಸ್ನೇಹಿತನಂತೆ ಕಂಡು ಬರುವ ಡಾ.ಭೋಸಲೆ ಅವರ ಗ್ರಾಮೀಣ ಸೇವೆ ಅನುಪಮವಾದುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಇಂಡಿ ಐಟಿಐ ಕಾಲೇಜಿನ ಪ್ರಾಚಾರ್ಯ ಪರಶುರಾಮ ರಜನಿಕರ ಮಾತನಾಡಿ,
ವೈದ್ಯರು ನಮ್ಮ ಎರಡನೇ ತಂದೆ ತಾಯಿಗಳು ಇದ್ದಂತೆ. ಡಾ.ಭೋಸಲೆ ಅವರು ನಾಗಠಾಣದಲ್ಲಿಯೇ 50 ವರ್ಷದ ಸೇವೆ ಪೂರೈಸಿದ್ದು ಅವಿಸ್ಮರಣೀಯ ಎಂದು ಹೇಳಿದರು.
ಮುಂಬೈ ನಗರದ ಗಿರೀಶ ಸಾರವಾಡ ಮಾತನಾಡಿ,
ತಮ್ಮ ಬಂಧು ಬಳಗದ ಪ್ರೀತಿಯ ಪರಿಸರವನ್ನು ಮರೆತು ಸೇವೆಗೈಯುವ ಡಾ.ಭೋಸಲೆ ಅವರ ಕ್ರಿಯಾಶೀಲತೆಯ ಕಾಯಕ ನಮ್ಮಲ್ಲಿ ಅಭಿಮಾನ ಮೂಡಿಸುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬೋಸಲೆ, ವೈದ್ಯ ಲೋಕ ಮಹಾಪರ್ವತ ಇದ್ದಂತೆ. ವೈದ್ಯಕೀಯ ಸೇವೆ ಎಲ್ಲ ಸೇವೆಗಳಿಗಿಂತ ಅನನ್ಯವಾಗಿದ್ದು, ರೋಗಿಗಳ ಆರೋಗ್ಯ ಕಾಳಜಿಯಲ್ಲಿ ತೊಡಗಿರುವದು ನನ್ನ ಪಾಲಿಗೆ ಪುಣ್ಯದ ಕೆಲಸ. ಗ್ರಾಮೀಣ ಜನತೆಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವ ಕಾರ್ಯ ಸದಾ ಮುನ್ನಡೆಸುವೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಾಯಬಣ್ಣ ಗೌಡೆನ್ನವರ, ಗ್ರಾಮಸ್ತರಾದ ಚನಮಲ್ಲಪ್ಪ ಸಮಗೊಂಡ, ರಾಮನಿಂಗ ಸಮಗೊಂಡ, ಸುಭಾಸ ಬಂಡೆ, ಸಂತೋಷ ಹಳ್ಳಿ, ರಾಮಗೊಂಡ ಕತ್ನಳ್ಳಿ, ಸಿದ್ದು ಕತ್ನಳ್ಳಿ, ಮೇಲಪ್ಪ ಬಗಲಿ, ಶ್ರೀಶೈಲ ರಾಂಪೂರ, ಸುರೇಶ ಕತ್ನಳ್ಳಿ, ಹನಮಂತರಾಯ ಸಮಗೊಂಡ, ಉಮೇಶ ಕತ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ರಾಘು ಮೊಗಳ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

