ವಿಜಯಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ | ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಆಗ್ರಹ
ವಿಜಯಪುರ: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಹೇಳಿದರು.
ಸೋಮವಾರ ನಗರದಲ್ಲಿ ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಸಂಬಂಧ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಲು ಒತ್ತಾಯಿಸಿ ತಮ್ಮ ನೇತೃತ್ವದಲ್ಲಿ
ಕರವೇ ವಿಜಯಪುರ ಜಿಲ್ಲಾ ಘಟಕದಿಂದ ಹಮ್ಮಿಕೊಂಡ ಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ತಾಯಿನಾಡು ಕರ್ನಾಟಕ ದೇಶದಲ್ಲೇ ಅತಿಹೆಚ್ಚು ಭೌಗೋಳಿಕ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯ. ಪ್ರಕೃತಿ ಸೌಂದರ್ಯಕ್ಕೆ, ಅತ್ಯುತ್ತಮ ಹವಾಗುಣಕ್ಕೆ ಹೆಸರಾದ ರಾಜ್ಯ. ಕನ್ನಡಿಗರು ಶಾಂತಿಪ್ರಿಯರು, ಹೃದಯ ಶ್ರೀಮಂತರು. ಕನ್ನಡಿಗರು ದೇಶದಲ್ಲೇ ಮೊದಲು ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣ ಹಾಕಿದವರು. ಕನ್ನಡ ನಾಡು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಚಾರಿತ್ರಿಕವಾಗಿ ವೈಭವದ ಇತಿಹಾಸವನ್ನು ಹೊಂದಿದ ನಾಡು. ಸ್ವಾತಂತ್ರ‍್ಯೋತ್ತರ ಭಾರತದಲ್ಲಿ ಇಂತಹ ಸಕಲ ಸಮೃದ್ಧಿಯ ನಾಡಿಗೆ ಇತರ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ಅವ್ಯಾಹತವಾಗಿ ನಡೆದುಕೊಂಡುಬಂದಿದೆ. ಇತ್ತೀಚಿನ ಎರಡು ಮೂರು ದಶಕಗಳಲ್ಲಿ ಇದು ತಾರಕಕ್ಕೆ ಏರಿದೆ. ಮೊದಲು ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಜನರು ವಲಸೆ ಬಂದು ಇಲ್ಲಿ ನೆಲೆ ನಿಂತರು. ಈಗ ಉತ್ತರದ ರಾಜ್ಯಗಳು, ಈಶಾನ್ಯ ರಾಜ್ಯಗಳಿಂದ ಜನರ ಪ್ರವಾಹವೇ ಹರಿದುಬರುತ್ತಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರಿನಂತಹ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿ ಮೀರಿದೆ ಎಂದು ಮುಳಜಿ ಖಂಡಿಸಿ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡ ನಾಡಿನ ಭೌಗೋಳಿಕ, ಸಾಮಾಜಿಕ, ರಾಜಕೀಯ ಚಹರೆಯೇ ಬದಲಾಗುತ್ತಿದೆ. ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರು ಈ ದೊಡ್ಡ ಪ್ರಮಾಣದ ವಲಸೆಯಿಂದ ಬಸವಳಿದು ಹೋಗುತ್ತಿದೆ. ಈ ಮಹಾವಲಸೆಯ ಬಹುಮುಖ್ಯ ದುಷ್ಪರಿಣಾಮ ಕನ್ನಡದ ಯುವ ಸಮುದಾಯದ ಮೇಲೆ ಅನ್ಯಾಯ ಆಗುತ್ತಿದೆ ಎಂದರು.
ರಾಜ್ಯ ಸಂಚಾಲಕ ಸಂತೋಷ ಪಾಟೀಲ (ಡಂಬಳ), ಜಿಲ್ಲಾ ಸಂಚಾಲಕ ಸಾಯಬಣ್ಣ ಎಂ. ಮಡಿವಾಳರ, ಜಿಲ್ಲಾಧ್ಯಕ್ಷೆ ಅನುರಾಧ ಕಲಾಲ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂ. ಕಾರ್ಯದರ್ಶಿ ಶಿವನಗೌಡ ಗುಜಗೊಂಡ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಂಪಿರ ವಾಲಿಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ, ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ, ಡಾ.ಎಮ್ ಡಿ ಮೇತ್ರಿ, ಸಾಮಾಜಿಕ ಜಾಲತಾಣದ ಸಂಚಾಲಕ ದಸ್ತಗೀರ ಸಾಲೋಟಗಿ, ಜಿಲ್ಲಾ ಉಪಾಧ್ಯಕ್ಷ ಮಹಾದೇವ ರಾವಜಿ, ಮಹಿಳಾ ಜಿಲ್ಲಾಧ್ಯಕ್ಷೆ ಅನುರಾಧ ಕಲಾಲ, ಗೌರವ ಅಧ್ಯಕ್ಷೆ ಮಂಜುಳ ಅಂಗಡಿ, ಸಾಂಸ್ಕೃತಿ ಘಟಕದ ಜಿಲ್ಲಾಧ್ಯಕ್ಷ, ಪ್ರಶಾಂತ ಚೌದ್ರಿ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಮಂಜುನಾಥ ಬಡಿಗೇರ, ವೈಧ್ಯಕೀಯ ಘಟಕದ ಜಿಲ್ಲಾಧ್ಯಕ್ಷ ಮಲ್ಲನಗೌಡ ಬಗಲಿ, ನಗರ ಘಟಕ ಅಧ್ಯಕ್ಷ ಫಯಾಜ್ ಕಲಾದಗಿ, ಸುರೇಶ ಜತ್ತಿ, ಇಂಡಿ ತಾ. ಅಧ್ಯಕ್ಷ ಬಾಳು ಮುಳಜಿ, ವಿಜಯಪುರ ತಾ. ಅಧ್ಯಕ್ಷ ವಿನೋದ ದಳವಾಯಿ, ಸಿಂದಗಿ ತಾ.ಅದ್ಯಕ್ಷ ಶ್ರೀಕಾಂತ ಬಿಜಾಪುರ, ಚಡಚಣ ತಾ. ಅಧ್ಯಕ್ಷ ಸೋಮು ಬಡಿಗೇರ, ಬಬಲೇಶ್ವರ ತಾ. ಅಧ್ಯಕ್ಷ ಆನಂದ ಬೂದಿಹಾಳ, ರಾಜು ಕುಲಕರ್ಣಿ, ಹುಚ್ಚಪ್ಪ ತಳವಾರ, ಮನೋಹರ ತಾಜವ, ಸುನೀಲ ಮಾಗೆ, ನಾಗರಾಜ ಅವಟಿ, ಕೃಷ್ಣಾ ಚವ್ಹಾಣ, ಈರಣ್ಣ ಕಲ್ಬುರ್ಗಿ, ಸಾದಿಕ್ ಜಾನ್ವೇಕರ, ರವಿ ಹೂಗಾರ, ನಸ್ಸೀಂ ರೋಜಿನ್ದಾರ, ಎಚ್ ಎಸ್. ಕಬಾಡೆ. ರಜಾಕ ಕಾಖಂಡಕಿ, ಪ್ರಕಾಶ ಬಿರಾದಾರ, ಮಹೇಶ ಹೂಗಾರ, ನಾಥು ರಾಠೋಡ, ಸವಿತಾ ಕಂಡೇಕರ, ರುಕ್ಮಿಣಿ ಚವ್ಹಾಣ, ಬಸಮ್ಮ ಜಾಬಾ, ಮಲಕಮ್ಮ ಪಾಟೀಲ, ಶ್ರೀದೇವಿ ಬಡಿಗೇರ, ನೀಲಾ ಕಾಳೆ, ಅರವಿಂದ ಪಾಟೀಲ, ಸಿದ್ದುಗೌಡ ತೊರವಿ, ಪ್ರಹ್ಲಾದ ಕಾಂಬಳೆ, ಸಂಜು ಗುನ್ನಾಪುರ, ಅನೀಲ ಚವ್ಹಾಣ, ಲಕ್ಷ್ಮಣ ಬೆಟಗೇರಿ, ಪ್ರಕಾಶ ಮಹೇಂದ್ರಕರ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತದನಂತರ ಜಿಲ್ಲಾಧಿಕಾರಿಗಳ ಆವರಣದಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹ ಕೈಕೊಳ್ಳಲಾಯಿತು

