ಬೆಂಗಳೂರು ಬೆಳಂದೂರು ಪೊಲೀಸ್ ಠಾಣೆ ಸಿಪಿಐ ರಮೇಶ ರೊಟ್ಟಿ ಮನದ ಮಾತು
ಆಲಮಟ್ಟಿ: ಪ್ರೌಢಶಾಲೆ, ಕಾಲೇಜ್ ಕಲಿಯುವಾಗ ಶಾಲೆಯ ನಂತರ ಇದೇ ಆಲಮಟ್ಟಿಯ ಗಿರಣಿಯಲ್ಲಿ ಜೋಳ ಬೀಸತಿದ್ದೆ, ಬೇಸಿಗೆ ರಜೆಯಲ್ಲಿ ಎರಡೂ ತಿಂಗಳು ಇಲ್ಲಿದ್ದ ಗೇಟ್ ಕಂಪನಿಯಲ್ಲಿ ಕಬ್ಬಿಣದ ಕಾರ್ಯನಿರ್ವಹಿಸಿ ಹಣ ಸಂಪಾದಿಸುತ್ತಿದ್ದೆ, ಆದರೆ ಓದುವ ತುಡಿತ ಮಾತ್ರ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ ಎಂದು ಬೆಂಗಳೂರು ಬೆಳಂದೂರು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಮೇಶ ರೊಟ್ಟಿ ಅಭಿಪ್ರಾಯಪಟ್ಟರು.
ಆಲಮಟ್ಟಿಯ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಮಂಜಪ್ಪ ಹರ್ಡೇಕರ ಪ್ರೇರಿತ ಎಂಪಿಎಸ್ ಮತ್ತು ಎಂಎಚ್ಎಂ ಶಾಲೆಗಳ ಹಳೆ ವಿಧ್ಯಾರ್ಥಿಗಳ ಬಳಗ ಏರ್ಪಡಿಸಿದ್ದ ಹಳೆ ಸಾಧಕ ವಿದ್ಯಾರ್ಥಿಗಳೊಂದಿಗೆ ಇವತ್ತಿನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
ಎಷ್ಟೇ ಕಷ್ಟ ಬಂದರೂ ಓದುವ ಪ್ರವೃತ್ತಿ ಮಾತ್ರ ಎಂದಿಗೂ ಕಡಿಮೆಯಾಗಲಿಲ್ಲ, ಆಲಮಟ್ಟಿಯ ಗ್ರಂಥಾಲಯ ಹಾಗೂ ಸುತ್ತಮುತ್ತಲಿನ ಅನಾಥ ಕೋಣೆಗಳೇ ನಮ್ಮ ಅಧ್ಯಯನದ ತಾಣಗಳಾಗಿದ್ದವು ಎಂದರು.
ಈಗಿನ ಶೈಕ್ಷಣಿಕ ವ್ಯವಸ್ಥೆ, ಜಗತ್ತು ಸಾಕಷ್ಟು ಮುಂದಿದೆ, ಇಲ್ಲಿಯ ವಿದ್ಯಾರ್ಥಿಗಳು ಆ ಮಟ್ಟಕ್ಕೆ ಬೆಳೆಯಬೇಕಿದೆ, ಹೀಗಾಗಿ ಇಲ್ಲಿಯ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡುವುದಾಗಿ ಹೇಳಿದರು.
ಎರಡೂ ಮಕ್ಕಳನ್ನು ಹೆತ್ತ ಮೇಲೆ ಎಸಿಯಾದೆ;
ಇದೇ ಆಲಮಟ್ಟಿಯ ಸರ್ಕಾರಿ ಶಾಲೆಯಲ್ಲಿ ಕಲಿತು ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಗ್ರಹಿಣಿಯಾಗಿ ಎರಡೂ ಮಕ್ಕಳ ಹೆತ್ತ ನಂತರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಅಚಲ ಛಲ, ಕೋಚಿಂಗ್ ಇಲ್ಲದೇ ನನ್ನನ್ನು ಕೆಎಎಸ್ ಅಧಿಕಾರಿಯನ್ನಾಗಿ ಮಾಡಿತು ಎಂದು ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಮಮತಾ ಹೊಸಗೌಡರ ಅಭಿಪ್ರಾಯಪಟ್ಟರು.
ನಿತ್ಯ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಯನ್ನು ಮೂರು ಗಂಟೆಗಳ ಕಾಲ ಪುಸ್ತಕದ ಹಾಗೆ ಓದುತ್ತಿದ್ದೆ, ನಂತರ ಓದುವ ವೇಗ ಹೆಚ್ಚಾದಾಗ ಒಂದು ಗಂಟೆಯಲ್ಲಿ ಪತ್ರಿಕೆ ಓದು ಪೂರ್ಣಗೊಳಿಸುತ್ತಿದ್ದೆ. ಸಹೋದರರ ಒತ್ತಾಸೆಯ ಮೇರೆಗೆ ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಕೆಎಎಸ್ ಪರೀಕ್ಷೆಗೆ ಸತತ ಅಧ್ಯಯನ ನಡೆಸಿದೆ. ಕುಟುಂಬ, ಮದುವೆ ಕೌಟುಂಬಿಕ ಕಾರ್ಯಕ್ರಮ ವನ್ನೆಲ್ಲಾ ಬದಿಗೊತ್ತಿ ಓದಿದೆ, ಯಾವುದೇ ತರಬೇತಿಯನ್ನು ಪಡೆಯಲಿಲ್ಲ ಎಂದರು. ನಿತ್ಯ ಪತ್ರಿಕೆ ಓದಿ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿಂದಲೇ ಸಿದ್ಧಗೊಳ್ಳಿ;
ಶೈಕ್ಷಣಿಕ ಪಠ್ಯಪುಸ್ತಕಗಳೊಂದಿಗೆ ಆಧುನಿಕ ಜಗತ್ತಿಗೆ ತೆರೆದುಕೊಳ್ಳುವ ನಾನಾ ಪರೀಕ್ಷೆಗೆ ಪ್ರೌಢಶಾಲಾ ಹಂತದಿಂದಲೇ ಅಧ್ಯಯನ ಆರಂಭಿಸಿ , ಬದುಕಿನಲ್ಲಿ ಪರೀಕ್ಷೆಯೇ ಮಾನದಂಡವಲ್ಲ ನಾನು ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ದ್ಚಿತೀಯ ದರ್ಜೆಯಲ್ಲಿ ಪಾಸಾಗಿದ್ದೆ ಎಂದು ಹುಣಸಗಿ ಸರ್ಕಲ್ ಪೊಲೀಸ್ ಇನ್ಸಪೆಕ್ಟರ್ ಸಚಿನ ಚಲವಾದಿ ಹೇಳಿದರು. ಸ್ಥಳೀಯರು ವ್ಯವಸ್ಥೆಗೆ ಮುಂದೆ ಬಂದರೆ ಚಿಕ್ಕ ಗ್ರಂಥಾಲಯ ತೆರೆದು ಇಲ್ಲಿನ ಮಕ್ಕಳ ಅಧ್ಯಯನಕ್ಕಾಗಿ ಎಲ್ಲಾ ವಿದಧ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಪ್ರತಿ ವರ್ಷ ಕೊಡಿಸುವುದಾಗಿ ಹೇಳಿದರು.
ನಿತ್ಯ ಓದಿನ ಜತೆ ಆಟವೂ ಆಡಿ;
ನಿತ್ಯ ಓದುವ ಜತೆ ಮೊಬೈಲ್ ಬಿಟ್ಟು ಆಟ ಆಡಿ, ಕನ್ನಡ, ಇಂಗ್ಲೀಷ್ ಮಾಧ್ಯಮ ಎಂಬ ಬೇಧ ಹಾಗೂ ಕೀಳು ಭಾವನೆಯಿಂದ ಹೊರಬಂದು ಅಧ್ಯಯನ, ಛಲ ಇದ್ದರೆ ಯಶಸ್ಸು ಸಾಧ್ಯ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾಧ್ಯಾಪಕ ಡಾ ಅರುಣ ಉಳ್ಳಾಗಡ್ಡಿ ಅಭಿಪ್ರಾಯಪಟ್ಟರು.
ಕಾನೂನು ಅಧಿಕಾರಿ ಗೀತಾ ಹೊಸಗಾಣಿಗೇರ, ಪುಣೆಯ ಚಾರ್ಟೆಡ್ ಅಕೌಂಟೆಂಟ್ ವಾಣಿಶ್ರೀ ಅಮರಗೊಂಡ, ಆರ್ಕಿಟೆಕ್ಟ್ ಸತೀಶ ನಡುವಿನಮನಿ,
ಧಾರವಾಡ ವಿದ್ಯಾನಗರ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಗಿನಾಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸ್ಪರ್ಧಾತ್ಮಕ ಗ್ರಂಥಾಲಯದ ಆಶಯಕ್ಕೆ ಕೈಜೋಡಿಸುವುದಾಗಿ ಹೇಳಿದರು. ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ಪ್ರಯತ್ನ ನಡೆಸಿದಾಗ ಅದು ಸಾಧ್ಯವಾಗದಿದ್ದಾಗ ಕುಗ್ಗದೇ, ನಿರಾಶೆಯಾಗದೇ ಯಾವುದೇ ಚಿಕ್ಕ ವೃತ್ತಿಯಲ್ಲಿಯೇ ಶೃದ್ಧೆಯಿಂದ, ನಿಷ್ಠೆಯಿಂದ, ಸ್ವಲ್ಪ ವೈವಿಧ್ಯತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ ಎಂದರು.
ಚಂದ್ರಶೇಖರ ಕೋಳೇಕರ, ಆನಂದ ಹೂಗಾರ, ಹಸನ್ ಯಂಡಿಗೇರಿ, ಮಹೇಶ ಗಾಳಪ್ಪಗೋಳ ಕಾರ್ಯಕ್ರಮ ನಿರ್ವಹಿಸಿದರು.

