ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಜರುಗಿದ ವೈದ್ಯರ ದಿನಾಚರಣೆಯಲ್ಲಿ ಡಾ.ಶರಣ ಮಳಖೇಡ್ಕರ ಅಭಿಮತ
ವಿಜಯಪುರ: “ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳು ತಾನಿಲ್ಲದಂತಿರಬೇಕು” ಎನ್ನುವ ಶರಣರ ವಾಣಿಯಂತೆ ಮಾಡಿದ ಸೇವೆಯ ಕುರಿತು ಆಡಿ ತೋರಿಸುತ್ತ ಸಾಗದೆ ತಮ್ಮ ಕಾರ್ಯವನ್ನು ಸಂತೃಪ್ತಿಯಿಂದ ಮಾಡುತ್ತಿರುವ ನಮ್ಮ ಆಸ್ಪತ್ರೆಯ ವೈದ್ಯರು ಅತೀ ಕಡಿಮೆ ಸಮಯದಲ್ಲಿಯೇ ಜೆಎಸ್‌ಎಸ್ ಎನ್ನುವ ಹೆಸರು ಕರುನಾಡಿಗೆ ಚಿರ ಪರಿಚಿತವಾಗುವಂತೆ ಮಾಡಿದ್ದಾರೆ. ಅವರ ಸಮರ್ಪಣಾ ಭಾವದ ಸೇವೆಗೆ ನಾವು ಏನು ನೀಡಿದರೂ ಕಡಿಮೆಯಾಗುತ್ತದೆ. ಅವರ ಋಣಭಾರವನ್ನು ಹೊತ್ತು ಅವರಿಗೆ ಶುಭ ಹಾರೈಸದ ಹೊರತು ನಮ್ಮ ಬಳಿ ಬೇರೆನು ಇಲ್ಲ ಎಂದು ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ ತಿಳಿಸಿದರು.
ಸೋಮವಾರ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಎಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದೆ. ಸಾವಿನ ಮನೆ ಬಾಗಿಲು ತಟ್ಟುವ ವ್ಯಕ್ತಿಗೆ ಭರವಸೆಯ ಚಿಕಿತ್ಸೆ ನೀಡುವ ಮೂಲಕ ಬದುಕಿನ ಅಂಗಳಕ್ಕೆ ತಂದು ಬಿಡುವ ಅದ್ಭುತವಾದ ಚಮತ್ಕಾರವನ್ನು ವೈದ್ಯರು ಮಾಡುತ್ತಾರೆ. ಹೀಗಾಗಿಯೇ ವೈದ್ಯರನ್ನು ನಾರಾಯಣನ ಸ್ವರೂಪ ಎಂದು ಭಾವಿಸುತ್ತಾರೆ. ನಮ್ಮ ಆಸ್ಪತ್ರೆಯ ವೈದ್ಯರಲ್ಲಿ ನಾನು ಕಂಡಿರುವ ಆತ್ಮ ಸಮರ್ಪಣಾ ಭಾವವು ರೋಗಿಗಳಲ್ಲಿ ಅರ್ಧ ರೋಗ ವಾಸಿಯಾಗುವುದಕ್ಕೆ ಕಾರಣವಾಗಿದೆ. ಎಲ್ಲಿ ಪ್ರೀತಿ ಇರುತ್ತದೆಯೊ ಅಲ್ಲಿ ಸಂತೃಪ್ತಿ ಇರುತ್ತದೆ. ಎಲ್ಲಿ ಸ್ವಾರ್ಥವಿರುತ್ತದೆಯೋ ಅಲ್ಲಿ ಅತೃಪ್ತಿ ಇರುತ್ತದೆ. ಆ ನಿಟ್ಟಿನಲ್ಲಿ ನಮ್ಮ ವೈದ್ಯರು ಯಾವುದೇ ಹೆಸರು ಮತ್ತು ಕೀರ್ತಿಗೆ ಆಸೆ ಪಡದೇ ಋಗ್ಣ ದೇವೋಭಃವ ಎನ್ನುವ ನಂಬಿಕೆಯಲ್ಲಿ ಕಾರ್ಯ ಮಾಡುತ್ತಿರುವುದರಿಂದ ನಮ್ಮ ಆಸ್ಪತ್ರೆಯ ಮೇಲೆ ಜನರಿಗೆ ನಂಬಿಕೆ ಬಂದಿದೆ. ಇನ್ನೂ ಹೆಚ್ಚಿನ ಸೇವೆಯನ್ನು ಒದಗಿಸುವ ಮಹದಾಸೆಯಿಂದ ಈವಾಗ ನಾಡಿನ ಖ್ಯಾತ ನ್ಯೋರೋ ಸರ್ಜನ್‌ಗಳನ್ನು ಕರೆತಂದು ಹೈ ಎಂಡ್ ನ್ಯೂರೋ ಕೇರ್ ಸೆಂಟರ್ ಪ್ರಾರಂಭಿಸುತ್ತಿದ್ದೆವೆ. ಅತ್ಯುತ್ತಮ ಸೇವೆಯ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭರವಸೆಯ ಬೆಳಕನ್ನು ಹರಿಸಿದ ನಮ್ಮ ಆಸ್ಪತ್ರೆಯ ಎಲ್ಲ ವೈದ್ಯ ಬಳಗ ಸೇರಿದಂತೆ ನಾಡಿನ ಸಮಸ್ತ ವೈದ್ಯರಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ನ್ಯೂರೋ ಸರ್ಜನ್ ಡಾ.ಮಯೂರ ಕಾಕು ಅವರು, ಬೆಂಗಳೂರಿನಲ್ಲಿ ನಾನು ಕೆಲಸ ಮಾಡುವಾಗ ಬರೀ ರೋಗವನ್ನು ವಾಸಿ ಮಾಡಿ ರೋಗಿಯನ್ನು ಮನೆಗೆ ಕಳುಹಿಸಿದರೆ ಆ ರೋಗ ಮತ್ತೆ ಅವರನ್ನು ಆವರಿಸಿಕೊಂಡರೆ ಏನು ಮಾಡಬೇಕು ಎಂದು ಆಲೋಚನೆ ಮಾಡಿದೆ. ಅದಕ್ಕೆ ಹೊಳೆದ ಉತ್ತರವಿಷ್ಟೇ, ರೋಗವನ್ನು ವಾಸಿ ಮಾಡುವುದು ನಮ್ಮ ಉದ್ಧೇಶವಾಗಿರದೇ ಸರ್ವರು ಆರೋಗ್ಯವಂತರಾಗಿರುವಂತೆ ಮಾಡುವುದೇ ಮುಖ್ಯವಾಗಬೇಕು. ಆ ನಿಟ್ಟಿನಲ್ಲಿ ನಾನು ನನ್ನ ವೃತ್ತಿಯ ಜೊತೆಯಲ್ಲಿ ಭಾರತ ಸನಾತನ ಯಾತ್ರೆಯ ಬಹು ದೊಡ್ಡ ಕೊಡುಗೆಯಾದಂತ ಯೋಗವನ್ನು ತೆಗೆದುಕೊಂಡು ಸಾಗುತ್ತಿರುವೆ. ಇದು ರೋಗವನ್ನು ವಾಸಿ ಮಾಡುವುದರ ಜೊತೆಗೆ ರೋಗವನ್ನು ತಡೆಯವ ಕೆಲಸ ಮಾಡುತ್ತದೆ. ವ್ಯಕ್ತಿಯು ಸದಾ ಆರೋಗ್ಯವಂತನಾಗಿರುವಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದ ಅವರು; ಯೋಗವನ್ನು ಚಿಕಿತ್ಸಾ ವಿಧಾನದಲ್ಲಿ ಅಳವಡಿಕೆಕೆ ಮಾಡುವ ಮೂಲಕ ಶಸ್ತ್ರಚಿಕಿತ್ಸೆಗಳಿಗೆ ವೆಚ್ಛವಾಗುವ ಸುಮಾರು ೭೫ ಕೋಟಿ ರೂಪಾಯಿಗಳನ್ನು ಉಳಿಸಿ ರೋಗಿಗಳ ಆರ್ಥಿಕ ಹೊರೆಯನ್ನು ತಗ್ಗಿಸಿದ ಸಂತೃಪ್ತಿ ನನಗಿದೆ. ಇಷ್ಟು ದಿನ ಬೆಂಗಳೂರಿನ ಜನಗಳಿಗೆ ಮಾತ್ರ ಸೀಮಿತವಾಗಿ ಉಳಿಯುತ್ತಿದ್ದ ನನ್ನ ಚಿಕಿತ್ಸೆ ಇನ್ನು ಮುಂದೆ ವಿಜಯಪುರ ಹಾಗೂ ಸುತ್ತ ಮುತ್ತಲಿನ ಜಿಲ್ಲೆಗಳ ಜನಗಳಿಗೆ ತಲುಪಿಸುವ ಮಹದುದ್ಧೇಶದಿಂದ ವಿಜಯಪುರ ಜೆಎಸ್‌ಎಸ್ ಆಸ್ಪತ್ರೆಗೆ ಆಗಮಿಸುತ್ತಿದ್ದೇನೆ. ಸದಾ ನಿಮ್ಮ ಸೇವೆಯಲ್ಲಿ ತೊಡಗಿರುವ ಜೆಎಸ್‌ಎಸ್‌ನಲ್ಲಿ ನಾನು ಸದಾ ನಿಮ್ಮ ಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಕೆ.ಎನ್.ರಮೇಶ ಅವರು ಪ್ರತಿ ದಿನ ರೋಗಿಗಳ ನೆರವಿಗೆ ನಿಲ್ಲುವ ಎಲ್ಲ ವೈದ್ಯರನ್ನು ಸನ್ಮಾನಿಸಿ ಮಾತನಾಡಿ, ಜೆಎಸ್‌ಎಸ್ ಹಾಸ್ಪಿಟಲ್ಸ್ ನಡೆದು ಬಂದ ಹಾದಿ ಹಾಗೂ ಜನರಿಗೆ ನೀಡುತ್ತಿರುವ ಸೇವೆಯ ಜೊತೆಗೆ ಪೂಜ್ಯರ ಹೆಸರಿನಡಿಯಲ್ಲಿ ಜನ ಸಾಮಾನ್ಯರಿಗೆ ಆಸ್ಪತ್ರೆ ಮಾಡುತ್ತಿರುವ ಸಹಾಯದ ಕುರಿತು ಶ್ಲಾಘಿಸಿದರು.
ಕಾರ್ಯಕ್ರಮವಲ್ಲಿ ಡಾ.ಸೌಮ್ಯಶ್ರೀ ಮಯೂರ ಕಾಕು, ಡಾ.ವೀಣಾ ಪಾಟೀಲ, ಡಾ.ಬಲವಂತಾರಾಯ ಮಸಳಿ, ಡಾ.ದೀಪಕ ಕಡ್ಲಿ, ಡಾ.ಶಿರೀಶ ಕನ್ನೂರ, ಡಾ.ಮಹಾಬಲೇಶ್ವರ ಬಡಿಗೇರ, ಡಾ.ವಿಕಾಸ ಸೊನಗೆ, ಡಾ.ಜ್ಞಾನೇಶ್ವರಿ ಸೇರಿದಂತೆ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ೫೦೦ ಕ್ಕೂ ಅಧಿಕ ಜನಗಳು ಭಾಗವಹಿಸಿ ಚಿಕಿತ್ಸೆ ಪಡೆದುಕೊಂಡರು.

