ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಡೆದ ಪ್ರವೇಶ ಪರೀಕ್ಷೆ

– ಚೇತನ ಶಿವಶಿಂಪಿ
ಮುದ್ದೇಬಿಹಾಳ: ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಶಿಕ್ಷಣ ಇಲಾಖೆ ಹಲವಾರು ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸುವ ಮೂಲಕ ನಾನಾ ಕಸರತ್ತುಗಳನ್ನ ನಡೆಸುತ್ತೆ. ಆದರೆ ಜವಾಬ್ದಾರಿಯುತ ಅಧಿಕಾರಿಗಳು ಮಾತ್ರ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದ ಕಾರಣ ಪರೀಕ್ಷಾ ನಿಯಮಗಳು ಕೆಲ ಬಡಪಾಯಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ ಅನ್ನೋ ಸಾಮಾಜಿಕ ಹೋರಾಟಗಾರರ ವಾದ ತಳ್ಳಿಹಾಕುವಂತಿಲ್ಲ. ಇದಕ್ಕೆ ಕೈಗನ್ನಡಿಯಾದ ಉದಾಹರಣೆಯೊಂದು ಇಲ್ಲಿದೆ ನೋಡಿ.
ಅಲ್ಲಿ ಖಾಲಿ ಇರುವ ಸೀಟುಗಳು ಒಟ್ಟು ೧೯. ಪರೀಕ್ಷೆ ಬರೆಯೋಕೆ ಬಂದ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ ೩೯೧. ಈ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಒಟ್ಟು ೧೮ ಕೊಠಡಿಗಳಲ್ಲಿ. ಅದರಲ್ಲೂ ಒಂದು ಕೊಠಡಿಯಲ್ಲಿ ಕೇವಲ ೪ ವಿದ್ಯಾರ್ಥಿಗಳು ಮಾತ್ರ.
ಈ ಅಂಕಿ ಸಂಖ್ಯೆಯನ್ನ ನೋಡಿದರೆ ಒಂದು ಕೊಠಡಿಯಲ್ಲಿ ಅದೆಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿರಬಹುದು ಎಂದು ನೀವೇ ಲೆಕ್ಕಾ ಹಾಕಿ. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯಲ್ಲಿ ಸಿರೀಸ್ ಇದ್ದರೆ ಒಂದು ಡೆಸ್ಕ್ ನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ನಡೆಸಬಹುದು. ಆದರೆ ಯಾವುದೇ ಸೀರೀಸ್ ಇಲ್ಲದ ಪ್ರಶ್ನೆ ಪತ್ರಿಕೆಗೆ ಇಲ್ಲಿ ಪರೀಕ್ಷೆ ಬರೆದಿರೋದು ಒಂದು ಡೆಸ್ಕ್ ಗೆ ಬರೋಬ್ಬರಿ ೩ ವಿದ್ಯಾರ್ಥಿಗಳು. ಅದೂ ಕೂಡ ಕೈಗೆಟುಕುವ ಅಂತರದಲ್ಲಿ. ಅಕ್ಕ ಪಕ್ಕದಲ್ಲಿ ಇಣುಕಿದರೆ ಸಾಕು, ಪಕ್ಕದಲ್ಲಿರುವ ವಿದ್ಯಾರ್ಥಿಯ ಉತ್ತರ ಪತ್ರಿಕೆ ಸಂಪೂರ್ಣವಾಗಿ ಕಾಣೋ ರೀತಿಯಲ್ಲಿ.
ಹೌದು, ಇಂಥದ್ದೊಂದು ಬೇಜವಾಬ್ದಾರಿಯುತ ಪರೀಕ್ಷೆ ನಡೆದದ್ದು ತಾಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ. ಇಲ್ಲಿ ೭ನೇ ತರಗತಿಗೆ ೪, ೮ನೇ ತರಗತಿಗೆ ೯, ೯ನೇ ತರಗತಿಗೆ ೬ ಉಳಿಕೆ ಸೀಟುಗಳು ಖಾಲಿ ಇದ್ದವು. ಈ ಸೀಟುಗಳ ಭರ್ತಿಗಾಗಿ ಜೂ೨೯ ರಂದು ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಒಂದು ಡೆಸ್ಕ್ ಗೆ ೩ ವಿದ್ಯಾರ್ಥಿಗಳನ್ನು ಕೂಡಿಸಿ ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ ತರಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಬೇಕಾಗಿರುವ ಜವಾಬ್ದಾರಿಯುತ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೇ ಕರ್ತವ್ಯಲೋಪ ಎಸಗಿರುವದು ಮೇಲ್ನೋಟಕ್ಕೆ ಸಾಬೀತಾದಂತಿದೆ. ಈ ಪರೀಕ್ಷೆಯ ಮುಖ್ಯ ಅಧೀಕ್ಷಕರ ಮತ್ತು ತಾಲೂಕು ನೂಡಲ್ ಬಳಿ ಪರೀಕ್ಷಾ ನಿಯಮಗಳ ಪ್ರತಿ ಇಲ್ಲದೇ ಇರೋದು ಇವರ ಬೇಜವಾಬ್ದಾರಿತನವನ್ನು ಸಾರಿ ಸಾರಿ ಹೇಳುತ್ತಿದೆ. ಪರೀಕ್ಷಾ ನಿಯಮಗಳು ಇದ್ದೂ ಮಾಧ್ಯಮಕ್ಕೆ ನೀಡಲು ಇವರು ಹೀಂದೇಟು ಹಾಕಿದ್ರಾ ಅಥವಾ ಪರೀಕ್ಷೆ ನಡೆಸೋಕೆ ಮೇಲಾಧಿಕಾರಿಗಳಿಂದ ಯಾವುದೇ ಆದೇಶನೇ ಆಗಿಲ್ವಾ ಎಂಬ ಬಗ್ಗೆ ಮೇಲಾಧಿಕಾರಿಗಳೇ ಉತ್ತರಿಸಬೇಕಿದೆ.
ಒಟ್ಟಾರೆಯಾಗಿ ಇಲ್ಲಿ ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಅನ್ನೋ ಒತ್ತಾಯ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿದೆ.
ಒಂದೇ ಡೆಸ್ಕ್ ನಲ್ಲಿ ೩ ವಿದ್ಯಾರ್ಥಿಗಳನ್ನು ಕೂರಿಸಿರುವ ಉದ್ದೇಶ ಕೇಳಿದ್ರೆ ಇವರು ಕೊಡೋ ಉತ್ತರ ಡೆಸ್ಕಗಳು ಕಡೆಮೆ ಇರೋದು. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ರಾ ಎಂಬ ಪ್ರಶ್ನೆಗೆ ಇವರ ಬಳಿ ಯಾವುದೇ ಉತ್ತರ ಇಲ್ಲ.
“ಯಾವುದೇ ಪ್ರಶ್ನೆ ಪತ್ರಿಕೆಗೆ ಸಿರೀಸ್ ಇಲ್ಲ. ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಪ್ರಶ್ನೆ ಪತ್ರಿಕೆ ಇತ್ತು. ಬೆಂಚ್‌ಗಳ ಕೊರೆತೆ ಇರುವದರಿಂದ ಒಂದು ಬೆಂಚ್ ನಲ್ಲಿ ೩ ವಿದ್ಯಾರ್ಥಿಗಳನ್ನು ಕೂರಿಸಲಾಗಿತ್ತು.”
– ಕೆ.ಎಚ್.ನದಾಫ್
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕಿ.
“ಪ್ರವೇಶ ಪರೀಕ್ಷೆಗಳನ್ನು ನಡೆಸುವ ಬಗ್ಗೆ ನಮಗೆ ಯಾವುದೇ ಗೈಡ್‌ಲೈನ್ಸ್ ಬಂದಿಲ್ಲ. ಹಾಗಾಗಿ ಒಂದು ಬೆಂಚ್ ಗೆ ಎಷ್ಟು ವಿದ್ಯಾರ್ಥಿಗಳನ್ನು ಕೂಡಿಸಬೇಕು ಎಂಬ ಬಗ್ಗೆ ಗೊತ್ತಾಗದೇ ಮತ್ತು ಬೆಂಚ್‌ಗಳು ಕಡೆಮೆ ಇರುವ ಕಾರಣಕ್ಕೆ ಬೆಂಚ್ ಗೆ ೩ ವಿದ್ಯಾರ್ಥಿಗಳನ್ನು ಕೂರಿಸಲಾಗಿತ್ತು. ಇನ್ನೊಮ್ಮೆ ಹೀಗಾಗದ ರೀತಿ ನೋಡಿಕೊಳ್ಳುವೆ.”
– ಎ.ಬಿ.ಬಗಲಿ, ತಾಲೂಕು ನೊಡಲ್ ಅಧಿಕಾರಿ
“ಪ್ರವೇಶ ಪರೀಕ್ಷೆಗಳನ್ನು ನಡೆಸಲು ಡಯಟ ಅಧಿಕಾರಿಗಳಿಂದ ಮೀಟಿಂಗ್ ಕರೆಯಲಾಗಿತ್ತು. ಅಲ್ಲಿ ತಿಳಿಸಿದಂತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಪರೀಕ್ಷೆ ನೆಡಸುವ ಬಗ್ಗೆ ಯಾವುದೇ ಲಿಖಿತ ಆದೇಶ ಇಲ್ಲ.”
– ಎನ್.ಬಿ.ತೆಗ್ಗಿನಮಠ
ಮುಖ್ಯೋಪಾಧ್ಯಾಯಕಿ, ಆದರ್ಶ ವಿದ್ಯಾಲಯ, ಬಿದರಕುಂದಿ.

