ವಾಲ್ಮೀಕಿ ನಿಗಮದ ೧೮೭ ಕೋಟಿ ರೂ.ಗಳ ಭ್ರಷ್ಟಾಚಾರ ಹಗರಣ ಖಂಡಿಸಿ ಬಿಜೆಪಿ ಎಸ್.ಟಿ.ಮೋರ್ಚಾ ಬೃಹತ್ ಪ್ರತಿಭಟನೆ

ವಿಜಯಪುರ: ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ರೂ.ಗಳ ಭ್ರಷ್ಟಾಚಾರ ಹಗರಣ ಖಂಡಿಸಿ ಬಿಜೆಪಿ ಎಸ್.ಟಿ.ಮೋರ್ಚಾ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ಗಾಂಧಿಚೌಕ್‌ನಲ್ಲಿ ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ದಲಿತರ ಕಲ್ಯಾಣ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪರಿಶಿಷ್ಟ ಕಲ್ಯಾಣ ಮೀಸಲಿಟ್ಟದ್ದ ೨೮ ಸಾವಿರ ಕೋಟಿ ಹಣ ದುರ್ಬಳಕೆ ಮಾಡಿದರು. ನಂತರ ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಇಟ್ಟಿದ್ದ ೧೮೭ ಕೋಟಿ ಹಣದಲ್ಲಿ ೪೫ ಕೋಟಿ ರೂ. ನೆರೆಯ ತೆಲಂಗಾಣ ರಾಜ್ಯಕ್ಕೆ ೯ ಬೇರೆ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ತಮ್ಮ ಪಕ್ಷಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಯೂನಿಯನ್ ಬ್ಯಾಂಕಿನವರು ತಮ್ಮ ಬ್ಯಾಂಕಿನಲ್ಲಾದ ಅವ್ಯವಹಾರ ಕುರಿತು ಸಿಬಿಐಗೆ ಪತ್ರ ಬರೆದರು. ಆದರೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ಅದರಿಂದ ತನಿಖೆ ಮಾಡಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆಸಿದ್ದರು ಎಂದು ಟೀಕಿಸಿದರು.
ಸರ್ಕಾರದ ಖಜಾನೆ ಖಾಲಿಯಾಗಿದೆ. ಹಾಸ್ಟೇಲ್‌ಗಳಲಿ ಹಾಸಿಗೆ ದಿಂಬು, ಊಟಕ್ಕೆ ಆಹಾರವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡು ಆಗುತ್ತಿಲ್ಲ. ಆದ್ದರಿಂದ ಸರ್ಕಾರ ಪೆಟ್ರೋಲ್-ಡಿಸೇಲ್,ಹಾಲಿ ದರ ಹೆಚ್ಚಿಸಿ ಜನರ ಜೀವನ ದುಸ್ಥಿತಿಗೆ ತಂದಿದೆ. ೧೪ ಬಾರಿ ಬಜೆಟ್ ಮಂಡಿಸಿ ಹಣಕಾಸು ಇಲಾಖೆ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಹಣಕಾಸು ಸ್ಥಿತಿಗೆ ಅಧೋಗತಿ ಒಯ್ದಿದ್ದಾರೆ. ರಾಜ್ಯದ ಜನರ ಮೇಲ ೯೫ ಸಾವಿರ ಕೋಟಿ ರೂ.ಗಳ ಸಾಲ ಹೊರಿಸಿರುವ ಇಂತಹ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಓ,ಬಿ.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿನ ೧೮೭ ಕೋಟಿ ಭ್ರಷ್ಟಾಚಾರದ ಹಣ ನಿಗಮಕ್ಕೆ ವಾಪಸ್ ಬರದಿದ್ದರೆ ಲಕ್ಷಾಂತರ ಜನರು ಬೀದಿಗಿಳಿದು ಹೋರಾಟ ನಡೆಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜೀನಾಮೆಗೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಗೆ ಅಧಿಕಾರ ನಡೆಸಲು ಆಗಿದಿದ್ದರೆ ರಾಜೀನಾಮೆ ನೀಡಿ ಹೊರಗೆ ಬನ್ನಿ ರಾಜ್ಯದ ಜನರು ಮರು ಆಯ್ಕೆ ಮಾಡುತ್ತಾರೆ ಎಂದರು.
ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ರವಿ ವಗ್ಗೇರ ಮಾತನಾಡಿ, ದಲಿತರ ಅಭಿವೃದ್ಧಿಗೆ ಇಟ್ಟ ಅನುದಾನ ಬೇರೆ ಯೋಜನೆಗಳಿಗೆ ಬಳಿಸಿಕೊಂಡಿದ್ದಲ್ಲದೇ ಕೇಂದ್ರದಿಂದ ಬಂದ ೮೩ ಕೋಟಿ ಹಣ ಲೆಕ್ಕವಿಲ್ಲ. ಪರಿಶಿಷ್ಟ ಪಾಲಿಗೆ ಮೀಸಲಿರುವ ಅನುದಾನ ನೀಡದೆ ಹೋದರೆ ಎಸ್.ಸಿ./ಎಸ್ಟಿ ಸಮುದಾಯದ ಜನರ ಬೀದಿಗಿಳಿದು ಹೋರಾಟ ನಡೆಸಿ ಹಣ ಮರಳಿ ಪಡೆಯುತ್ತೇವೆಂದು ಎಚ್ಚರಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ಹೋಗುವಾಗ ಅಂಬೇಡ್ಕರ ವೃತ್ತದ ಬಳಿ ಪೊಲೀಸರು ಕಾರ್ಯಕರ್ತರನ್ನು ತಡೆದರು. ಆಗ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿಗೆ ತಮ್ಮ ಅಹವಾಲು ಸಲ್ಲಿಸುವುದಾಗಿ ತಿಳಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.
ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳ್ಳಿ, ಉಮೇಶ್ ಕೊಳಕೂರ, ಪ್ರಧಾನ ಕಾರ್ಯದರ್ಶಿಗಳಾದ ಮಳುಗೌಡ ಪಾಟೀಲ, ಸಾಬು ಮಾಶಾಳ, ಈರಣ್ಣ ರಾವೂರ, ಶಂಕರ್ ಹೂಗಾರ, ಸಂತೋಷ್ ಪಾಟೀಲ ಡಂಬಳ, ಮಲ್ಲಿಕಾರ್ಜುನ ಕಿವುಡಿ, ಸಂಜಯ ಪಾಟೀಲ್ ಕನಮಡಿ, ಭೀಮಶಂಕರ್ ಹದನೂರು, ಅನಿಲ್ ಜಮಾದಾರ್, ಚಿದಾನಂದ ಚಲವಾದಿ, ಸಪ್ನಾ ಕಣ್ಮುಚನಾಳ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದರ್ ಬಿಜೆಪಿ ಮುಖಂಡರಾದ ಸಿದ್ದು ಬುಳ್ಳಾ ಕೃಷ್ಣ ಗುನಾಳಕರ್, ವಿಜಯ್ ಜೋಶಿ, ರಾಜೇಶ್, ಕಾಂತು ಶಿಂಧೆ. ಭರತ್ ಕೋಳಿ ಪಾಪು ಸಿಂಗ್ ರಜಪೂತ್, ವಿಟ್ಟಲ್ ನಡುವಿನ ಕೇರಿ ಶಿಲ್ಪ ಕುದುರಗೊಂಡ, ಪ್ರವೀಣ ನಾಟೇಕರ್, ಲಕ್ಷ್ಮಿ ಕನ್ನೊಳ್ಳಿ, ಪರಶುರಾಮ್ ಹೊಸಪೇಟ, ಮಾಂತೇಶ್ ಬೇವುರ, ರಮೇಶ ಕೋಳಿ, ಗುರು ತಳವಾರ ರಾಜು ಕೋಳಿ, ಪ್ರಶಾಂತ ಕದ್ದರಗಿ, ಗಿರಮಲ್ ಕೋಳಿ, ಶರಣು ದಳವಾಯಿ, ಮಾಂತೇಶ್ ಬೇವುರ, ರಮೇಶ ಕೋಳಿ ಗುರು ತಳವಾರ, ರಾಜು ಕೋಳಿ, ಪ್ರಶಾಂತ ಕದ್ದರಗಿ, ಗಿರಮಲ್ ಕೋಳಿ,ಶರಣು ದಳವಾಯಿ ಸೇರಿದಂತೆ ರಾಜ್ಯ ಬಿಜೆಪಿ ಪದಾಧಿಕಾರಿಗಳು ಮಂಡಲ ಅಧ್ಯಕ್ಷರುಗಳು ಮಹಿಳಾ ಮೂರ್ಚ ಪದಾಧಿಕಾರಿಗಳು ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

