ಎಷ್ಟು ವಿಚಿತ್ರ ಈ ಜೀವನ ಮಗು ಹುಟ್ಟಿದಾಗ ಎಲ್ಲರೂ ಕೇಳುವುದು ಒಂದೇ ಮಾತು ಅದೆನೆಂದರೆ ಮಗು ತೂಕ ಎಷ್ಟು?
ಒಂದೂವರೆ ಕೆ ಜೀ ಅಥವಾ ಎರಡರ ಹತ್ತಿರ ಅಂದರೆ ಅಯ್ಯೋ ತುಂಬಾ ವೀಕ್ ಇದೆ ಮಗು ಅಂತಾರೆ.
ಎರಡೂವರೆ ,ಮುಕ್ಕಾಲು ಅಂದರೆ,ಆಹಾ!! ಗುಂಡು ಗುಂಡಾದ ಚಂದದ ಮಗು ಅಂತಾರೆ. ಬೆಳೆಯುತ್ತಿರುವಾಗ,ಹೆಣ್ಣು ಮಗು ಇರಲಿ ಗಂಡಿರಲಿ ಗುಂಡು ಗುಂಡಾಗಿದ್ದರೆ ಚಂದ ಚಂದ ಅಂತ ಹೊಗಳುತ್ತಾರೆ ಜನ.ದುಂಡಗಿನ ಮಕ್ಕಳನ್ನು ಎಲ್ಲರೂ ಇಷ್ಟ ಪಡುತ್ತಾರೆ.ಆದರೆ ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ಬೊಜ್ಜಾಗಿ ಪರಿವರ್ತನೆಗೊಳ್ಳುತ್ತದೆ.
ಹರೆಯಕ್ಕೆ ಬರುತ್ತಿದ್ದಂತೆ ಅಯ್ಯೋ ,ಆ ಹುಡುಗಿ ತುಂಬಾ ದಪ್ಪ, ಯಾರಪ್ಪಾ ಈಕೆನ್ನ ಮದುವೆ ಆಗೋದು.. ಸ್ವಲ್ಪ ತೂಕ ಇಳಿಸಿಕೊಳ್ಳಬಾರದ ಅಂತ.ಪಾಪ ಆಕೆ ಆರೋಗ್ಯವಾಗಿದ್ದರೂ ಕೂಡ
ಇನ್ನು ಗಂಡನಿಗೆ ಮನೇಲಿ ಚಪಾತಿ ಮತ್ತು ಹೆಂಡತಿ ಎರಡೂ ತೆಳ್ಳಗಿರಬೇಕು.
ಒಂದು ಕಾಲದಲ್ಲಿ ಗುಂಡಗಿದ್ದವರಿಗೇ ಹೊಗಳಿಕೆ ಬರುತಿತ್ತು. ವಾವ್ ಅತ್ತೆ ಮನೆಯವರು ಬಹಳ ಚೆನ್ನಾಗಿ ನೋಡಿಕೊಳ್ತಾ ಇದ್ದಾರೆ ಅನ್ನಿಸತ್ತೆ. ನೋಡು ಹೇಗೆ ಗುಂಡ್ ಗುಂಡಗೆ ಆಗಿದ್ದಾಳೆ ಅಂತ ಶಭಾಷ್ಗಿರಿ ಕೊಡ್ತಾ ಇದ್ರು.
ಆದರೆ ಈಗ ಹೊಟ್ಟೆ ಇರಬಾರದು,ತೂಕ ಜಾಸ್ತಿ ಇರಬಾರದು,ಅದನ್ನು ಕಡಿಮೆ ಮಾಡಲು ಜಿಮ್ಮು,ಯೋಗಾ,ವಾಕಿಂಗು ,ಡಯಟ್ಟು ಅಬ್ಬಬ್ಬ ,ಒಂದೇ ಎರಡೇ. ನನಗೆ ಅನ್ನಿಸೋದೆನೆಂದರೆ ಶರೀರ ದಪ್ಪ ಅಥವಾ ತೆಳ್ಳಗೆ ಹೇಗೇ ಇರಲಿ ನಾವು ಆರೋಗ್ಯದಿಂದ ಇರೋದು ಮುಖ್ಯ.ತೆಳ್ಳಗಿದ್ದು ರೋಗಿಷ್ಟರಾಗಿರೋದಕ್ಕಿಂತ ಆರೋಗ್ಯದಿಂದ ಇದ್ದರೆ, ದಪ್ಪಗಿದ್ದರು ತೊಂದರೆ ಇಲ್ಲಾ.ತನು ಕರಗದೆ ರೋಗಗಳ ಗೂಡಾದರೆ ಮಾತ್ರ ಶತಾಯ ಗತಾಯ ಮೈ ಕರಗಿಸಲೇ ಬೇಕು.
ನನಗೂ ಅನ್ನಿಸತ್ತೆ ಜಿಮ್ಮು ಯೋಗ ವಾಕಿಂಗು ಜಾಸ್ತಿ ಮಾಡಿ ತನು ಕರಗಿಸಬೇಕು ಅಂತ.ಆದ್ರೆ ನಾನು ತುಂಬಾ ಸೋಮಾರಿ. ಎರಡೇ ದಿನ ಏನೇ ಮಾಡಿದರೂ.ಒಮ್ಮೆ ಹೀಗೆ “ತನು ನಿನ್ನದು ಈ ಮನ ನಿನ್ನದು ” ಅಂತ ಹಾಡ್ತಾ ಇದ್ದೆ. ಅದಕ್ಕೆ ನನ್ನ ಪತಿ ದೇವರು ಯಪ್ಪಾ ನಿನ್ನ ಮನವೇನೋ ಓಕೆ. ನಿನ್ನ ತನುವಿನ ಭಾರ ಕಮ್ಮಿ ಮಾಡ್ಕೋ ಅಂತ ಹೇಳಿ ಬಿಡೋದ. ಇರಲಿ ಬಿಡಿ ಹೇಳಿದ ಕೂಡ್ಲೇ ಕರಗೋಕೆ ಅದೇನು ಕರ್ಪೂರನಾ..
ಆದರೆ ಒಂದು ವಿಷಯ. ಜನರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ನಾವು ನಮ್ಮ ತೂಕದ ಬಗ್ಗೆ ಹೆಚ್ಚು ಯೋಚಿಸದೇ ತನುಮನದ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಬೊಜ್ಜು ಇರಲಿ ಇಲ್ಲದೆ ಇರಲಿ ಸಮಯಕ್ಕೆ ಸರಿಯಾಗಿ ಹಿತ ಮಿತವಾದ ಆಹಾರ ಸೇವಿಸಿ, ಮನಸ್ಸನ್ನು ಕೂಡ ಶಾಂತವಾಗಿ ಇರಿಸಿಕೊಳ್ಳಬೇಕು.ತನು ಕರಗಿಸಿಕೊಳ್ಳಬೇಕು ಅನ್ನೋ ಹುಚ್ಚಿಗೆ ಬಿದ್ದು
ನಮ್ಮ ಅಮೂಲ್ಯವಾದ ಜೀವಕ್ಕೆ ಸಂಚಕಾರ ತಂದು ಕೊಳ್ಳುವುದು ಬೇಡ.ಅತಿಯಾದರೆ ಅಮೃತ ಕೂಡ ವಿಷವಾಗತ್ತೆ ಅನ್ನೋ ಹಾಗೆ ಯಾವುದೂ ಅತಿಯಾಗದೇ ಎಲ್ಲವನ್ನೂ ಹಿತಮಿತದಲ್ಲಿರಿಸಿಕೊಂಡು ಬದುಕು ಚಂದಗಾಣಿಸಿಕೊಳ್ಳೋಣ.