ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟ ಕುರಿತು ಜಾಗೃತಿ ಕಾರ್ಯಕ್ರಮ
ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಚಡಚಣ ಪೊಲೀಸ್ ಠಾಣೆ ವತಿಯಿಂದ ಕ್ರೀಡೆ, ಶಿಸ್ತು ಮತ್ತು ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಡಚಣ ಪೊಲೀಸ್ ಠಾಣೆಯ ಪಿಎಸ್ಐ ಸಂಜಯಕುಮಾರ ಕಲ್ಲೂರ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಾದ ಗುಟುಕಾ ,ತಂಬಾಕು, ಸಿಗರೇಟು ಗಳಿಂದ ದೂರ ಇರಬೇಕು. ಒಮ್ಮೆ ನೀವು ಮಾದಕ ವಸ್ತುಗಳಿಗೆ ದಾಸರಾದರೆ ಅದರಿಂದ ಹೊರಗೆ ಬರಲು ಬಹಳ ಕಷ್ಟವಾಗುತ್ತದೆ. ತಮ್ಮ ಕನಸನ್ನು ನನಸು ಮಾಡಲು ದುಶ್ಚಟಗಳಿಂದ ದೂರ ಇರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಿದ್ದೇಶ್ವರ ಸ್ವಾಮಿಗಳ, ಸಿಂಪಿಲಿಂಗಣ್ಣವರ ಅವರ ಚಿಂತನೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಬ್ಬ ಉತ್ತಮ ಪ್ರಜೆಯಾಗಿ ಸಮಾಜದಲ್ಲಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ದೇವರಹಿಪ್ಪರಗಿ ಸರ್ಕಾರಿ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಡಾ. ಅಶೋಕ ಜಾಧವ ಮಾತನಾಡಿ ಮೊದಲು ನಾವು ಬದಲಾವಣೆಯಾಗಬೇಕಾದರೆ, ನಮ್ಮ ಜೀವನ ಶೈಲಿ, ಬದಲಾಗಬೇಕು. ಶಾರೀರಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ ಆಗಬೇಕಾದರೆ ಕ್ರೀಡೆ ಬಹಳ ಅತ್ಯವಶ್ಯಕವಾಗಿರುತ್ತದೆ ಇದು ನಮ್ಮ ಜೀವನದಲ್ಲಿ ಶಿಸ್ತನ್ನು ತಂದುಕೊಡುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ.ರಾಠೋಡ ಮಾತನಾಡಿ, ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಹಾಳು ಮಾಡುವುದಿಲ್ಲ. ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಶಿಕ್ಷಣ ಸಂಸ್ಥೆಯ ಆಡಳಿತಧಿಕಾರಿ ಡಾ.ಎಸ್.ಎಸ್.ಚೋರಗಿ ಮಾತನಾಡಿದರು.
ಕಾಲೇಜಿನ ದೈಹಿಕ ನಿರ್ದೇಶಕ ಎಸ್.ಎಸ್.ಅವಟಿ ಅವರು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಮುತ್ತಿನ, ನಿರ್ದೇಶಕರಾದ ನಾಗಮ್ಮ ತಾಯಿ ಅಂಕದ, ಗ್ರಂಥಪಾಲಕರಾದ ಶ್ರೀ. ಎಂ. ಕೆ . ಬಿರಾದಾರ, ಐ. ಕ್ಯೂ.ಎ.ಸಿ ಕೋ ಆರ್ಡಿನೇಟರ್ ಡಾ. ಎಸ್ ಎಸ್ ದೇಸಾಯಿ, ಖ್ಯಾತ ಗಾಯಕರಾದ ಸೋಮಶೇಖರ ರಾಠೋಡ, ದೈಹಿಕ ಶಿಕ್ಷಣ ನಿರ್ದೇಶಕರಾದ ಚಾಂದ ಮುಕುಂದ, ಚಡಚಣ ಪೋಲಿಸ ಸಿಬ್ಬಂದಿ ವರ್ಗ, ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಮಹಾಂತೇಶ ಜನವಾಡ ನಿರೂಪಿಸಿದರು. ಎಸ್.ಎಸ್.ಪಾಟೀಲ ವಂದಿಸಿದರು.

