ಮುದ್ದೇಬಿಹಾಳ: ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಈಗಾಗಲೇ ಚರ್ಮಗಂಟು ರೋಗದ ವಿರುದ್ಧ ಲಸಿಕಾ ಅಭಿಯಾನವು ಪ್ರಾರಂಭವಾಗಿದ್ದು ಈ ಅಭಿಯಾನವು ಜುಲೈ ೨೦ನೇ ತಾರೀಖಿನವರೆಗೆ ಚಾಲ್ತಿಯಲ್ಲಿರುತ್ತದೆ. ಎಲ್ಲ ರೈತರುಗಳು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಪಶು ವೈದ್ಯಾಧಿಕಾರಿ ಶಿವಾನಂದ ಮೇಟಿ ಸಲಹೆ ನೀಡಿದರು.
ಈ ಕುರಿತು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಈ ರೋಗವು ದನ ಮತ್ತು ಎಮ್ಮೆ ಎರಡರಲ್ಲಿಯೂ ಎಲ್‌ಎಸ್‌ಡಿ ವೈರಸ್ ನಿಂದ ಉಂಟಾಗುತ್ತದೆ. ಆದರೆ ಕಾಯಿಲೆ ಮತ್ತು ರೋಗಕ್ಕೆ ತುತ್ತಾಗುವ ದೃಷ್ಟಿಯಿಂದ ಎಮ್ಮೆಗಳಿಗೆ ಹೋಲಿಸಿದರೆ ದನಗಳಲ್ಲಿ ಈ ರೋಗವು ತೀವ್ರವಾಗಿರುತ್ತದೆ. ಮಿಶ್ರ ತಳಿ ರಾಸುಗಳಲ್ಲಿ ಚರ್ಮದ ಗಂಟುಗಳ ಗಾತ್ರವು ಹೆಚ್ಚು ದೊಡ್ಡದಾಗಿ ಇರುತ್ತವೆ. ಸದರಿ ಲಸಿಕಾ ಅಭಿಯಾನದಲ್ಲಿ ಕೇವಲ ದನಗಳಿಗೆ ಮಾತ್ರ ಲಸಿಕೆಯನ್ನು ಹಾಕಲಾಗುತ್ತದೆ. ಈ ರೋಗವು ಪ್ರಾಣಿಜನ್ಯ ರೋಗವಲ್ಲ. ಆದ್ದರಿಂದ ಜಾನುವಾರುಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಯಾವುದೇ ಗಾಬರಿ ಪಡುವ ಅವಶ್ಯಕತೆ ಇಲ್ಲ. ಕಾಯಿಸಿದ ಹಾಲು ಮನುಷ್ಯರ ಬಳಕೆಗೆ ಸುರಕ್ಷಿತವಾಗಿರುತ್ತದೆ. ಕುರಿ ಮತ್ತು ಮೇಕೆಗಳು ದನಗಳ ಸಮೀಪವಿದ್ದರೂ ಕೂಡ ಈ ರೋಗವು ಹರಡುವುದಿಲ್ಲ. ಈ ರೋಗವು ಮುಖ್ಯವಾಗಿ ಸಂಧಿಪದಿ ಕೀಟಗಳು ವಿಶೇಷವಾಗಿ ಕಚ್ಚುವ ನೊಣಗಳು ಸೊಳ್ಳೆಗಳು ಮತ್ತು ಉಣ್ಣೆಗಳಿಂದ ಹರಡುತ್ತದೆ. ಹಾಗೂ ಕಲುಷಿತಗೊಂಡ ನೀರು ಮತ್ತು ಆಹಾರ ಸೇರಿದಂತೆ ವೀರ್ಯ, ಭ್ರೂಣದ ಮಾಸಿನ ಮೂಲಕ ಹರಡುವ ಸಾಧ್ಯತೆ ಇರುತ್ತದೆ ಎಂದರು.
ರೋಗದ ಲಕ್ಷಣಗಳು
ಜ್ವರ, ಹೈನುರಾಸುಗಳಲ್ಲಿ ಹಾಲಿನ ತೀವ್ರ ಕಡಿತ, ಊದಿಕೊಂಡಿರುವ ದುಗ್ಧರಸ ಗ್ರಂಥಿಗಳು, ಕೀಲುಗಳ ಬಾವು ಮತ್ತು ಊತ, ಜ್ವರ ಕಾಣಿಸಿಕೊಂಡ ೪೮ ಗಂಟೆಗಳಲ್ಲಿ ದೇಹದ ಬಹುತೇಕ ಎಲ್ಲಾ ಭಾಗಗಳಲ್ಲಿ ೧-೫ ಸೆಂ.ಮೀ ವ್ಯಾಸದ ಚರ್ಮದ ಗಂಟುಗಳು ಕಾಣಿಸುತ್ತವೆ. ರೋಗವು ಮುಂದುವರಿದಂತೆ ಗಂಟುಗಳು ನೆಕ್ರೋಟಿಕ್ ಹಾಗೂ ಫೈಬ್ರೋಟಿಕ್ ಆಗಬಹುದು. ಇದು ಕೆಲವು ತಿಂಗಳುಗಳವರೆಗೆ ಕೂಡ ಇರಬಹುದು. ಸಾಮಾನ್ಯವಾಗಿ ದೊಡ್ಡ ಗಂಟುಗಳು ನೆಕ್ರೋಟಿಕ್ ಪ್ರಕ್ರಿಯೆಯಿಂದ ಗುಣವಾಗುತ್ತವೆ ಮತ್ತು ಸಣ್ಣ ಗಂಟುಗಳು ಸ್ವಯಂ ಪ್ರೇರಿತವಾಗಿ ಗುಣವಾಗುತ್ತವೆ. ಗರ್ಭ ಧರಿಸಿದ ಹಸುಗಳಲ್ಲಿ ಗರ್ಭಪಾತವಾಗಬಹುದು. ಮೂಗಿನ ಹೊಳ್ಳೆಗಳು, ಕೆಚ್ಚಲು ಮತ್ತು ಯೋನಿಯ ಮೇಲೆ ಹುಣ್ಣುಗಳು ಬೆಳೆಯಬಹುದು.
ಚಿಕಿತ್ಸೆ:
ರೋಗದ ಗುಣಲಕ್ಷಣಗಳು ಹಾಗೂ ರೋಗ ಚರಿತ್ರೆಯ ಆಧಾರದ ಮೇಲೆ ಪಶುವೈದ್ಯರು ರೋಗವನ್ನು ತಾತ್ಕಾಲಿಕವಾಗಿ ನಿರ್ಣಯಿಸಬಹುದು. ಅದಾಗ್ಯೂ ರೋಗದ ದೃಢೀಕರಣ ಪ್ರಯೋಗಾಲಯದ ಪರೀಕ್ಷೆಗಳಂದ ಮಾಡಿಸಬೇಕು. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಪ್ರತಿಜೀವಕಗಳ ಜೊತೆ ಸಹ ಚಿಕಿತ್ಸೆಯನ್ನೂ ಪ್ರಾರಂಭಿಸಬೇಕು.
ರೋಗವನ್ನು ನಿಯಂತ್ರಿಸುವ ಕ್ರಮಗಳು:
ರೋಗನಿರೋಧಕ ಲಸಿಕೆ, ಸೋಂಕಿತ ಪ್ರಾಣಿಗಳನ್ನು ಬೇರ್ಪಡಿಸುವಿಕೆ, ಜಾನುವಾರು ಮಾರುಕಟ್ಟೆ ನಿಷೇಧಿಸುವಿಕೆ, ಸಾಧ್ಯವಾದಲ್ಲಿ ಸೊಳ್ಳೆ ಪರದೆ ಉಪಯೋಗಿಸುವಿಕೆ, ಕೀಟ ನಿವಾರಕಗಳು ಹಾಗೂ ಕೀಟನಾಶಕಗಳ ನಿಯಮಿತ ಬಳಕೆ, ಪ್ರಾಣಿಗಳ ಕೊಟ್ಟಡಿಗಳನ್ನು ಸೋಂಕು ನಿವಾರಕಗಳಿಂದ ನಿರ್ಮಲೀಕರಣ ಮಾಡುವುದು ಮತ್ತು ಕಳೇಬರವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು.
ಸೋಂಕನ್ನು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಲಸಿಕಾ ಕಾರ್ಯಕ್ರಮ ಅತ್ಯಂತ ಮುಖ್ಯವಾದ ಸಾಧನವಾಗಿದೆ. ಲಸಿಕೆಗೊಳಪಟ್ಟ ಪ್ರಾಣಿಗಳಲ್ಲಿ ಪ್ರತಿರಕ್ಷೆಯನ್ನು ಅಭಿವೃದ್ಧಿ ಮಾಡುವ ಮೂಲಕ ಸೋಂಕಿಗೆ ಒಳಗಾಗುವ ಪ್ರಾಣಿಗಳ ಒಟ್ಟು ಸಂಖ್ಯೆಗಳನ್ನು ಕಡಿಮೆ ಮಾಡುತ್ತದೆ. ಲಸಿಕೆಯನ್ನು ಹಾಕಿಸುವುದರಿಂದ ನೇರ ಮತ್ತು ಪರೋಕ್ಷ ಆರ್ಥಿಕ ನಷ್ಟವನ್ನು ತಪ್ಪಿಸಬಹುದು.
Subscribe to Updates
Get the latest creative news from FooBar about art, design and business.
Related Posts
Add A Comment

