ಬಿಜ್ಜರಗಿ ಗ್ರಾಪಂಗೆ ಭೇಟಿ ನೀಡಿದ ತಿಕೋಟಾ ತಾಪಂ ಇಒ ಬಸವರಾಜ ಐನಾಪುರ ಪ್ರಶಂಸೆ
ತಿಕೋಟಾ: ತಾಲೂಕಿನ ಬಿಜ್ಜರಗಿ ಗ್ರಾಮ ಪಂಚಾಯತಿಗೆ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಸ್ವಚ್ಛ ಭಾರತ ಅಭಿಯಾನ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಆರಂಭದಲ್ಲಿ ಮನರೇಗಾ ಯೋಜನೆಯ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಯಲ್ಲಿ ಸಂಪೂರ್ಣವಾಗಿ ವಿಕಲಚೇತನರು ಕೆಲಸ ನಿರ್ವಹಣೆ ಮಾಡುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿಯೇ ಮನರೇಗಾ ಯೋಜನೆಯಡಿ ನೊಂದಣಿಯಾದ ವಿಶೇಷಚೇತನರಿಗೆ ಕೆಲಸ ನೀಡುವಲ್ಲಿ ಹಾಗೂ ವಿಶೇಷಚೇತನರ ಮಾನವ ದಿನಗಳ ಸೃಜನೆ ಮಾಡುವಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಇದು ನಮಗೆ ಮತ್ತು ನಿಮಗೆಲ್ಲಾ ಹೆಮ್ಮೆಯ ವಿಷಯ ಎಂದರು. ಕೆಲಸ ನಿರ್ವಹಣೆ ಮಾಡುತ್ತಿರುವ ಎಲ್ಲ ವಿಶೇಷಚೇತನರು ಸಂಪೂರ್ಣ ೧೦೦ ದಿನಗಳ ಕೆಲಸ ನಿರ್ವಹಿಸಲು ತಿಳಿಸಿದರು. ಯೋಜನೆಯಡಿ ತಾಲೂಕು ವ್ಯಾಪ್ತಿಯಲ್ಲಿ ೪೭೬ ವಿಶೇಷಚೇತನರಿಗೆ ಉದ್ಯೋಗ ಖಾತ್ರಿ ಕಾರ್ಡ್ ನೀಡಲಾಗಿದ್ದು, ಈಗಾಗಲೇ ೧೦೮ ಜನರು ಕೆಲಸ ನಿರ್ವಹಿಸಿದ್ದು, ೧೯೫೦ ಮಾನವ ದಿನಗಳನ್ನು ಸೃಜನೆ ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಅಧಿಕ ಮಾನವ ದಿನ ಸೃಜನೆಯಾಗಿದ್ದು ನಮ್ಮ ತಾಲೂಕಿನಲ್ಲಿಯೇ ಎಂದರು. ಮುಂದಿನ ದಿನಮಾನದಲ್ಲಿ ಎಲ್ಲ ವಿಕಲಚೇತನರಿಗೂ ನರೇಗಾ ಯೋಜನೆಯಡಿ ಕೆಲಸ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರ ಜೊತೆಗೆ ನರೇಗಾ ಯೋಜನೆಯಡಿ ಕಡ್ಡಾಯವಾಗಿ ಕನಿಷ್ಠ ೬೦% ಮಹಿಳಾ ಭಾಗವಹಿಸುವಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ವೀಕ್ಷಣೆ ಮಾಡಿ, ಪ್ರತಿ ದಿನ ಗ್ರಾಮದಲ್ಲಿ ಕಸ ಸಂಗ್ರಹ ಮಾಡುತ್ತಿರುವ ಕುರಿತು ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ಘಟಕದ ಸುತ್ತಲೂ ತಂತಿ ಬೇಲಿ ಅಳವಡಿಸಿ, ಸಸಿಗಳನ್ನು ಬೆಳೆಸಿರುವದನ್ನು ಕಂಡು ಗ್ರಾಮ ಪಂಚಾಯತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಮಲ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಪಿಡಿಓ ಅವರಿಗೆ ತಿಳಿಸಿದರು.
ನಂತರ ಗ್ರಾಮದ ರೈತ್ತರ ಹೊಲಗಳಿಗೆ ತೆರಳುವ ಮುಖ್ಯ ರಸ್ತೆಯಾದ ಮಾರ್ಕವ್ವನ ಹಾದಿಯು ಮಳೆಗಾಲದಲ್ಲಿ ನೀರು ಬಂದು ರೈತ್ತರ ಹೊಗಳಿಗೆ ತೆರಳಲು ಬಲು ಕಷ್ಟವಾಗುತ್ತದೆ ಹಾಗೂ ಜೋರಾಗಿ ಮಳೆ ಬಂದರೆ ಆ ರಸ್ತೆ ಮೂಲಕ ಸಾಗುವುದು ಅಸಾಧ್ಯವಾಗುತ್ತದೆ. ಹೀಗಾಗಿ ತಾಲೂಕು ಪಂಚಾಯತಿಯ ವಿಶೇಷ ಅನುದಾನದಲ್ಲಿ ಸದರಿ ರಸ್ತೆಯನ್ನು ಸುಧಾರಣೆ ಮಾಡಲು ಗ್ರಾಪಂ ಸದಸ್ಯ ಸುರೇಶ ಮಸಳಿ ಅವರು ವಿನಂತಿಸಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತಾಗಿ ಮನವಿ ಪತ್ರ ಕಳುಹಿಸುವಂತೆ ಸ್ಥಳದಲ್ಲಿದ್ದ ಪಿಡಿಓ ಅವರಿಗೆ ತಿಳಿಸಿದರು.
ನಂತರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸ್ವಚ್ಛ ಭಾರತ ಅಭಿಯಾನ (ಗ್ರಾ) ಯೋಜನೆಯಡಿ ಬಾಕಿಯಿರುವ ಫಲಾನುಭವಿಗಳ ಪತ್ತೆ ಮಾಡಿ ಅವರಿಗೆ ನಿಯಮಾನುಸಾರ ತಿಳುವಳಿಕೆ ನೀಡಿ ಶೌಚಾಲಯ ಕಟ್ಟಿಸಿ, ಅವರಿಗೆ ಗೌರವಧನ ಪಾವತಿಸಲು ತಿಳಿಸಿದರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಶಾಲೆ & ಅಂಗನವಾಡಿಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕುರಿತು ವರದಿ ನೀಡಲು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ಜೆ.ಎ.ದಶವಂತ ಅವರಿಗೆ ಸೂಚಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜೆ.ಎ.ದಶವಂತ ಅವರು ಮಾತನಾಡಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಯ ಅಧಿಕಾರಿಗಳ ಸಹಕಾರದಿಂದ ಬಿಜ್ಜರಗಿಯಲ್ಲಿ ಕಳೆದ ಮೂರು ವರ್ಷಗಳಿಂದ ವಿಶೇಷಚೇತನರಿಗೆ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಉದ್ಯೋಗ ನೀಡಲಾಗುತ್ತಿದೆ. ಈ ವರ್ಷ ಈಗಾಗಲೇ ೩೦ ಜನರಿಗೆ ಉದ್ಯೋಗ ನೀಡಲಾಗಿದ್ದು, ಅವರಿಂದ ೭೭೩ ಮಾನವ ದಿನಗಳ ಸೃಜನೆ ಮಾಡಲಾಗಿದೆ. ಬಾಕಿ ಉಳಿದಿರುವ ವಿಶೇಷಚೇತನರಿಗೂ ಉದ್ಯೋಗ ನೀಡುವ ಪ್ರಯತ್ನದಲ್ಲಿದ್ದೇವೆ. ಶೀಘ್ರದಲ್ಲಿಯೇ ೧೦೦% ವಿಶೇಷಚೇತನರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದರು. ಜೊತೆಗೆ ಮಹಿಳೆಯರಿಗೂ ಈ ಯೋಜನೆಯಡಿ ಹಲವಾರು ಅವಕಾಶಗಳಿದ್ದು, ಅವರಿಗೂ ಮಹಿಳಾ ಸಂಘದ ಸಭೆ, ಮನೆ-ಮನೆ ಭೇಟಿಯಂತಹ ವಿಶೇಷ ಐಇಸಿ ಚಟುವಟಿಕೆಗಳ ಮೂಲಕ ಜಾಗೃತ್ತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಕ್ಯಾತನ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಮಸಳಿ, ಗೋಪಾಲ ತೋಳೆ, ಕಾರ್ಯದರ್ಶಿ ಶ್ರೀಶೈಲ ಜಾಲಗೇರಿ, ತಾಂತ್ರಿಕ ಸಹಾಯಕ ಅಭಿಯಂತರ ಶ್ರೀಧರ ಸಾವಳಗಿ, ಬಿ.ಎಫ್.ಟಿ ಸಿದ್ರಾಯ ದಾಶ್ಯಾಳ, ಕಾಯಕ ಬಂಧು ವಿನಾಯಕ ಕುಂಬಾರ, ಕೂಲಿಕಾರರು & ಗ್ರಾಮ ಪಂಚಾಯತಿ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.

