ಬಸವನಬಾಗೇವಾಡಿ: ಯುವಜನಾಂಗ ಮಾದಕ ವಸ್ತುಗಳಿಂದ ದೂರವಿರಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳನ್ನು ಸಾಗಾಣಿಕೆ ಹಾಗೂ ಮಾರಾಟ ಮಾಡಬಾರದು. ಈ ವಸ್ತುಗಳನ್ನು ಸಾಗಾಣಿಕೆ, ಮಾರಾಟ ಮಾಡುವವರು ಕಂಡುಬಂದರೆ ಅಂತಹವರ ಮೇಲೆ ಪೊಲೀಸ್ ಇಲಾಖೆಯು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಸ್ಥಳೀಯ ಪಿಐ ವಿಜಯ ಮುರಗುಂಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆ, ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟ ನಿಷೇಧ ಕುರಿತು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರು ಕ್ಷಣಿಕ ಸುಖಕ್ಕಾಗಿ ಸೇವಿಸುವ ಮಾದಕ ವಸ್ತುಗಳು ಆರೋಗ್ಯ ಹಾಳು ಮಾಡುವ ಜೊತೆಗೆ ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಯಾರೂ ಕೂಡ ಮಾದಕ ವಸ್ತುಗಳ ಸೇವನೆಯ ಬಲೆಗೆ ಬೀಳಬಾರದು. ಮಾದಕ ವಸ್ತುಗಳ ಸೇವನೆ ಸಾವಿಗೆ ಆಹ್ವಾನ ನೀಡಿದ್ದಂತೆ. ವ್ಯಸನಕ್ಕೆ ಬಲಿಯಾದರೆ ವ್ಯಕ್ತಿ ಹಣ, ಸಮಯ, ಜೀವನವನ್ನೇ ವ್ಯರ್ಥ ಮಾಡಿಕೊಳ್ಳುತ್ತಾನೆ. ನಮಗೆ ದೊರೆತಿರುವ ಜೀವನ ಅಮೂಲ್ಯವಾಗಿದೆ. ಇದನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಪಿಎಸ್ಐ ಎನ್.ಟಿ.ದಡ್ಡಿಮನಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗುವ ಜೊತೆಗೆ ಕುಟುಂಬದ ನೆಮ್ಮದಿಯೂ ಹಾಳಾಗುತ್ತದೆ. ಮಾದಕ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇದರ ಬಗ್ಗೆ ಎಲ್ಲರೂ ಜಾಗೃತರಾಗಬೇಕಿದೆ. ವ್ಯಸನಮುಕ್ತ ಸಮಾಜ ಅವಶ್ಯಕತೆ ನಿರ್ಮಾಣದಲ್ಲಿ ಯುವಜನತೆ ಸೇರಿದಂತೆ ಎಲ್ಲರ ಪಾತ್ರವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಬಿ.ಹೊಸಮನಿ ಮಾತನಾಡಿ, ಉತ್ತಮ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಎಲ್ಲರ ಜವಾಬ್ದಾರಿಯಿದೆ. ಯುವಜನತೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ನಿರಂತರ ಅಧ್ಯಯನಶೀಲತೆ ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಶಾಂತ ಮಮದಾಪುರ, ಡಾ.ಪುತಳಾ ಪಾಟೀಲ, ಶೀಲಾ ರಾಮತೀರ್ಥ, ಶ್ರೀಶೈಲ ಪೂಜಾರಿ ಇತರರು ಇದ್ದರು. ಎನ್ಎಸ್ಎಸ್ ಸಂಯೋಜಕ ಡಾ.ಎಚ್.ಎಂ. ನಾಟೀಕಾರ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ನಿರೂಪಿಸಿದರು. ಡಾ.ಅನಂತ ಪದ್ಮನಾಭ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

