ಮಣೂರ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು | ಮಧ್ಯಾನ್ಹದ ಬಿಸಿಯೂಟದ ವಿಳಂಬತೆ | ಶಾಲೆಗೆ ಸರಿಯಾಗಿ ಬಾರದ ಮುಖ್ಯಗುರು
ದೇವರಹಿಪ್ಪರಗಿ: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಮಧ್ಯಾನ್ಹದ ಬಿಸಿಯೂಟದ ವಿಳಂಬತೆ, ಪ್ರಭಾರಿ ಮುಖ್ಯಗುರು ಶಾಲೆಗೆ ಸರಿಯಾಗಿ ಬಾರದೇ, ಪಾಠ ಮಾಡದಿರುವ ಕುರಿತು ಬೇಸತ್ತು ಶಾಲಾ ಆವರಣದಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು.
ತಾಲ್ಲೂಕಿನ ಮಣೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಬುಧವಾರ ಶಾಲೆಯ ತಮ್ಮ ಶೈಕ್ಷಣಿಕ ಕುಂದುಕೊರತೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಕ್ಕಳಾದ ರಕ್ಷಿತಾ ಜೋಗೂರ, ಹಣಮಂತ ಹಿರೇಕುರುಬರ ಮಾತನಾಡಿ, ಮಧ್ಯಾನ್ಹದ ಬಿಸಿಯೂಟ ಸರಿಯಾಗಿ ವಿತರಿಸುತ್ತಿಲ್ಲ. ಶಾಲೆಯ ಪ್ರಭಾರ ಮುಖ್ಯಗುರು ಜಯಶ್ರೀ ನಾಯಿಕ ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿಲ್ಲ. ಇದರಿಂದ ಪಾಠಗಳಿಗೆ ಅಡತಡೆಯಾಗಿದೆ. ಕೂಡಲೇ ಇವುಗಳನ್ನು ಸರಿಪಡಿಸಲು ಆಗ್ರಹಿಸಿದರು.
ಮಕ್ಕಳ ಧರಣಿ ಹಾಗೂ ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಇಓ ಆರೀಫ್ ಬಿರಾದಾರ ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷರು ಹಾಗೂ ಪಾಲಕರು ಶಿಕ್ಷಕಿ ಜಯಶ್ರೀಯನ್ನು ತರಾಟೆಗೆ ತೆಗೆದುಕೊಂಡು ಮಕ್ಕಳ ಬೇಡಿಕೆಯಂತೆ ಪ್ರಭಾರಿ ಮುಖ್ಯಗುರು ಸ್ಥಾನವನ್ನು ಎಸ್.ಎಚ್.ಬಿರಕಗಡ್ಡಿ ಅವರಿಗೆ ವಹಿಸಿ ಯಾವುದೇ ಕುಂದು ಕೊರತೆಗಳಾಗದಂತೆ ಗಮನ ಹರಿಸಲು ಆದೇಶಿಸಿದರು.
ಮಕ್ಕಳಾದ ರೂಪಾ ಬೇನಾಳ, ಚಂದ್ರಿಕಾ ಮರಾಠಿ, ಪೂಜಾ ಕನ್ನೋಳ್ಳಿ, ಸಂಕೇತ ಸಿಂದಗಿ, ಐಶ್ವರ್ಯ ಹಡಪದ, ನಿಂಗರಾಜ ನಾಗಾವಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಸೋಮಯ್ಯ ನಂದಿಕೋಲ, ಪಾಲಕರಾದ ಆನಂದ ಪೂಜಾರಿ, ರಾಮು ಸಿಂದಗಿ, ಅಶೋಕ ಮಣೂರ, ರವಿ ಸಿಂದಗಿ, ಹಣಮಂತ ವಾಲಿಕಾರ, ಅಬ್ಬಾಸ ಬಾಗವಾನ, ಶಾಂತು ಬಜಂತ್ರಿ, ರವಿ ತಳವಾರ ಇದ್ದರು.

