ಬಸವನಬಾಗೇವಾಡಿ: ತಾಲೂಕಿನ ನಂದಿಹಾಳ ಪಿಎಚ್ ಗ್ರಾಮವು ಶ್ರೀಗುರು ಆರೂಢರ ಐಕ್ಯಕ್ಷೇತ್ರವಾಗಿದೆ. ಶ್ರೀಗುರು ಆರೂಢರ ಭಕ್ತರ ಮನವಿಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಗ್ರಾಮಕ್ಕೆ ನಂದಿಹಾಳ ಪಿಎಚ್ ಬದಲಾಗಿ ಆರೂಢನಂದಿಹಾಳ ಎಂದು ಅಧಿಕೃತವಾಗಿ ಆದೇಶ ಮಾಡಿದೆ. ಈ ಗ್ರಾಮವು ಇನ್ನು ಮುಂದೆ ಆರೂಢನಂದಿಹಾಳ ಎಂದು ದಾಖಲೆಯಲ್ಲಿ ದಾಖಲಾಗುತ್ತದೆ. ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಜನರು ಆರೂಢನಂದಿಹಾಳ ಎಂದು ತಮ್ಮ ಪತ್ರ ವ್ಯವಹಾರ ಸೇರಿದಂತೆ ನಿತ್ಯ ಜೀವನದಲ್ಲಿ ಇದನ್ನು ಬಳಕೆ ಮಾಡಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ತಾಲೂಕಿನ ಆರೂಢನಂದಿಹಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಗುರು ಆರೂಢರ ೧೧೬ ನೇ ಜಯಂತ್ಯೋತ್ಸವ ಹಾಗೂ ಗ್ರಾಮಕ್ಕೆ ಆರೂಢನಂದಿಹಾಳ ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಒಳಿತು ಮಾಡಿದವರು ಮಾತ್ರ ಆರೂಢರ ತರಹ ಮಹಾನ್ ಶರಣರಾಗಲು ಸಾಧ್ಯ. ಇಲ್ಲಿನ ಶ್ರೀಗುರು ಆರೂಢರು ಹುಬ್ಬಳ್ಳಿ ಸಿದ್ದಾರೂಢರ ಎರಡನೇ ಅವತಾರವೆಂದು ಭಕ್ತರು ಭಾವಿಸಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಈ ಗ್ರಾಮದ ಅಭಿವೃದ್ಧಿಯ ಬಗ್ಗೆ ಸ್ಪಂದಿಸುವುದಾಗಿ ಹೇಳಿದ ಅವರು ಈಗಾಗಲೇ ಪಹಣಿಗೆ ಆಧಾರ ಲಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ರೈತಬಾಂಧವರು ತಪ್ಪದೇ ತಮ್ಮ ಪಹಣಿಗೆ ಆಧಾರ ಲಿಂಕ್ ಮಾಡುವ ಮೂಲಕ ಭೂಮಿ ಉಳಿವಿಗೆ ಸಹಕರಿಸಬೇಕೆಂದರು.
ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ ಮಾತನಾಡಿ, ಆರೂಢರ ಕೃಪೆಯಿಂದ ಇಂದು ಅಡವಿ ನಂದಿಹಾಳ ಹೋಗಿ ಆರೂಢನಂದಿಹಾಳವಾಗಿದೆ. ಒಂದೇ ಜನ್ಮದಲ್ಲಿ ಸಪ್ತಭೂಮಿಕೆಗಳನ್ನು ಸಾಧಿಸಿದವರು ಆರೂಢರು ಮಾತ್ರ ಎಂದರು.
ಅರಟಾಳದ ಸಿದ್ದಾರೂಢ ಮಠದ ಶಿವಪುತ್ರ ಶರಣರು ಮಾತನಾಡಿ, ಕುಗ್ರಾಮದಲ್ಲಿ ಜನಿಸಿ ಬೇಡಿದ್ದನ್ನು ನೀಡುವ ಕಲ್ಪವೃಕ್ಷವಾಗಿದ್ದವರು ಆರೂಢರು. ಆರೂಢರು ನಡೆದಾಡಿದ ಈ ಗ್ರಾಮ ಪವಿತ್ರ ಕ್ಷೇತ್ರವಾಗಿದೆ. ಒಂದೇ ಜನ್ಮದಲ್ಲಿ ೧ ರಿಂದ ೬ ಭೂಮಿಕೆಗಳನ್ನು ಸಾಧಿಸಿದ ಮಹಾತ್ಮರನ್ನು ಕಂಡಿರಬಹುದು. ಆದರೆ ಶ್ರೀಗುರು ಆರೂಢರು ಒಂದೇ ಜನ್ಮದಲ್ಲಿ ಸಂಸಾರದಲ್ಲಿದ್ದುಕೊಂಡು ಸಪ್ತಭೂಮಿಕೆಗಳನ್ನು ಸಾಧಿಸಿ ಭಕ್ತರ ಕಾಮಧೇನು ಎಂದೆನಿಸಿಕೊಂಡಿದ್ದಾರೆ ಎಂದರು.
ಚಿಕ್ಕರೂಗಿಯ ಈರಣ್ಣ ಶಾಸಿ, ಹುಣಶ್ಯಾಳ ಪಿಬಿಯ ಶಂಕ್ರಣ ಆಲೂರ, ಶ್ರೀಗುರು ಆರೂಢರ ದೇವಸ್ಥಾನ ಕಮೀಟಿ ಅಧ್ಯಕ್ಷ ಶ್ರೀಶೈಲ ಕನ್ನೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಂತಯ್ಯ ಹಿರೇಮಠ, ಬಮ್ಮಯ್ಯ ಹಿರೇಮಠ, ರಾಮಚಂದ್ರ ಸಾಸನೂರ, ಖಾಸ್ಗತ ಸಜ್ಜನ, ಬಸಯ್ಯ ಹಿರೇಮಠ, ಕೆಂಚು ವಾಲೀಕಾರ, ಇರಗಂಟೆಪ್ಪ ಸಜ್ಜನ, ಗುರುನಾಥ ಸಜ್ಜನ, ಸಿದ್ದಾರೂಢ ಮದರಿ, ಶಾಂತು ಕನ್ನೂರ ಇತರರು ಇದ್ದರು.
ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೂಢನಂದಿಹಾಳ ಎಂದು ಗ್ರಾಮದ ನಾಮಫಲಕವನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅನಾವರಣಗೊಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

