ಶಿವಣಗಿ(ದೇವರಹಿಪ್ಪರಗಿ): ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ, ಮೆದಳು ಜ್ವರದಂತ ರೋಗಗಳು ಮಳೆಗಾಲದ ಸಮಯದಲ್ಲಿ ಹೆಚ್ಚು ಹರಡುವ ಸಾಧ್ಯತೆಯಿದ್ದು, ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ, ವೈದ್ಯಾಧಿಕಾರಿ ಡಾ. ಜಯಶ್ರೀ ದೇವಗಿರಿ ತಿಳಿಸಿದರು.
ವಿಜಯಪುರ ತಾಲ್ಲೂಕಿನ ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿ.ಪಂ, ಶಾಲಾ ಶಿಕ್ಷಣ ಇಲಾಖೆ ಗ್ರಾಮೀಣ ವಲಯ ವಿಜಯಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿವಣಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಶಾಲಾ ಶಿಕ್ಷಕರಿಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನೆಯ ಹತ್ತಿರ ತೆಗ್ಗು, ಗುಂಡಿಗಳಿದ್ದರೆ ಮಣ್ಣಿನಿಂದ ಮುಚ್ಚಬೇಕು, ಮನೆಯ ಸುತ್ತಮುತ್ತ ಹೂವಿನ ಕುಂಡ, ಟಾಯರ್, ಗ್ಲಾಸ್ ಅಥವಾ ಪ್ಲಾಸ್ಟಿಕ್ ಬಾಟಲ್, ತೆಂಗಿನ ಚಿಪ್ಪು, ಮತ್ತು ಇತರೆ ವಸ್ತುಗಳಿದ್ದರೆ ಅದರಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು, ಅವುಗಳನ್ನು ವಿಲೇವಾರಿ ಮಾಡಬೇಕು.
ಸೊಳ್ಳೆಗಳ ಕಚ್ಚುವಿಕೆಯಿಂದ ಪಾರಾಗಲು, ಪ್ರತಿಯೊಬ್ಬರು ತಮ್ಮ ಮನೆಯ, ಕಿಡಕಿ, ಬಾಗಿಲುಗಳಿಗೆ ತಂತಿ ಜಾಲರಿ ಅಳವಡಿಸುವುದು, ಸೊಳ್ಳೆ ಲಿಕ್ವಿಡ್, ಸೊಳ್ಳೆಬತ್ತಿ, ಉಪಯೋಗಿಸಿ, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಿಕೊಂಡು ಸೊಳ್ಳೆಗಳು ಕಚ್ಚಿದಂತೆ ನೋಡಿಕೊಳ್ಳಬೇಕು ವಿಶೇಷವಾಗಿ ಗರ್ಭಿಣಿಯರು, ವೃದ್ಧರು ಮತ್ತು ಚಿಕ್ಕ ಮಕ್ಕಳು, ಸೊಳ್ಳೆ ಕಡಿತದಿಂದ ಜಾಗೃತರಾಗಿರಬೇಕು, ಮನೆಗಳಲ್ಲಿ ನೀರು ಸಂಗ್ರಹ ವಸ್ತುಗಳನ್ನು ಕನಿಷ್ಟ ನಾಲ್ಕರಿಂದ ಐದು ದಿನಕ್ಕೊಮ್ಮೆ ತೊಳೆದು, ಮತ್ತೆ ನೀರನ್ನು ಸಂಗ್ರಹಿಸಿ, ಮೇಲೆ ಭದ್ರವಾಗಿ ಮುಚ್ಚಬೇಕು, ಇದರಿಂದ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬಹುದು ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎಸ್.ಗುಬಚಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ನೀಡಲಾಗುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ತರಬೇತಿಯನ್ನು ನಿಮ್ಮ ಶಾಲಾ ಮಕ್ಕಳಿಗೆ ತಿಳಿಸಬೇಕೆಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಜೋಶಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್. ಎಸ್.ಮೋರಟಗಿ ಮಾತನಾಡಿ, ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಚಿಕನ್ ಗುನ್ಯಾ, ಡೆಂಗ್ಯೂ, ಮೆದುಳು ಜ್ವರ, ಬರಲು ಸೊಳ್ಳೆಗಳೇ ಕಾರಣವಾಗಿವೆ. ಇವುಗಳಿಂದ ರಕ್ಷಿಸಿಕೊಳ್ಳುವ ಕ್ರಮ ತಿಳಿಯಬೇಕೆಂದು ವಿವರಿಸಿದರು.
ತರಬೇತಿಯಲ್ಲಿ ಆರೋಗ್ಯ ಇಲಾಖೆಯ ಶಂಕ್ರಯ್ಯ ಮೇಲಿನಮಠ, ಐ.ಎಮ್.ಕಾಳೆ, ಬಶೀರ್‌ಅಹ್ಮದ್ ಬೆನಕನಹಳ್ಳಿ, ವಿಶ್ವನಾಥ್ ಹಿರೇಮಠ, ತಬಸ್ಸುಮ್ ಕೋಟ್ಯಾಳ, ರಾಮನಗೌಡ ಪಾಟೀಲ್, ಲಕ್ಷ್ಮಿ ಅರಿಸಿಬಾಗಿಲ, ಅಶ್ರಫ್‌ಅಲಿ, ಅಶ್ವಿನಿ ಮೊರೆ ಮತ್ತು ಅಜರುದ್ದೀನ್ ಮಿರ್ದೆ ಸೇರಿದಂತೆ ಸರಕಾರಿ, ಅನುದಾನ ಸಹಿತ, ಅನುದಾನ ರಹಿತ, ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

