ಮೋರಟಗಿಯಲ್ಲಿ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ
ಮೋರಟಗಿ: ಸಹಕಾರ ಸಂಸ್ಥೆಗಳು ಬದುಕಿದರೆ ಮಾತ್ರ ರೈತರಿಗೆ ಸರ್ಕಾರ ಸಹಕರಿಸಲು ಸಾಧ್ಯ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತರು ಉತ್ತಮ ಬದುಕು ನಡೆಸಲು ಮೊದಲು ಪ್ರಕೃತಿ ಒಲಿಯಬೇಕು. ನಂತರ ಸರ್ಕಾರ ಒಲಿಯಬೇಕು. ಇಂದು ರಾಜ್ಯದಲ್ಲಿ ೬೫ ಲಕ್ಷಕ್ಕೂ ಹೆಚ್ಚು ಜನ ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ ಎಂದರೆ ಸಹಕಾರಿ ಸಂಘಗಗಳೇ ಕಾರಣ. ಮೊದಲು ರೈತರಿಗೆ ಶೇ.೧೬ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿತ್ತು. ನಂತರ ಶೇ.೧೨, ಶೇ.೭ ಹಾಗೂ ಶೇ.೩ರಂತೆ ಬಡ್ಡಿ ದರ ಕಡಿಮೆಯಾಗುತ್ತ ಬಂತು. ಸದ್ಯ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ರಾಜ್ಯ ಎಂಬ ಹೆಮ್ಮೆ ಕರ್ನಾಟಕದ್ದಾಗಿದೆ ಎಂದರು.
ಸರ್ಕಾರ ರೈತರ ಪರವಾಗಿ ನಿಲ್ಲದಿದ್ದರೆ ಕೃಷಿಕರು ಸಂಕಷ್ಟ ಎದುರಿಸಬೇಕಾಗುತ್ತದೆ. ರೈತರು ಸಾಕಷ್ಟು ಪರಿಶ್ರಮದಿಂದ ಬೆಳೆದೆರೂ ಸೂಕ್ತ ಬೆಲೆ ಸಿಗದೆ ತೊಂದರೆಗೆ ಸಿಲುಕುತ್ತಾರೆ. ರೈತರಿಗೆ ನೀರು, ವಿದ್ಯುತ್ ಕೊಡುವುದು ಎಷ್ಟು ಮುಖ್ಯವೋ ಅಷ್ಟೇ ಅವರ ಬೆಲೆಗೆ ಉತ್ತಮ ಬೆಲೆ ಸಿಗಬೇಕು. ರೈತರ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅವರು ಇಂದಿಗೂ ಸಾಲದಲ್ಲೇ ಬದುಕುವಂತಾಗಿದೆ. ಈ ಭಾಗದ ರೈತರು ದ್ರಾಕ್ಷಿ, ಈರುಳ್ಳಿ, ತೊಗರಿ ಮತ್ತಿತರ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ದೇಶದಲ್ಲಿ ಯಾವುದೇ ಉತ್ಪಾದನೆ ಉತ್ತಮ ಬೆಲೆ ಸಿಗುವಂತೆ ರೈತರ ಬೆಳೆಗಳಿಗೂ ಉತ್ತಮ ಬೆಲೆ ಸಿಗಬೇಕು ಎಂದರು.
ಇಂದು ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ೨೮ ಕಾರ್ಖಾನೆಗಳು ರುವುದರಿಂದ ಕಬ್ಬಿಗೆ ಉತ್ತಮ ಬೆಲೆ ಸಿಗುತ್ತಿದೆ. ಕಬ್ಬು ಬೆಳೆಗಾರರಿಗೆ ಸಹಕಾರಿ ಸಂಸ್ಥೆಗಳೇ ಆಸರೆಯಾಗಿವೆ.
ರೈತರ ಬದುಕು ಹಸನಾಗಬೇಕಾದರೆ ಇಂಥ ಸಹಕಾರಿ ಸಂಸ್ಥೆಗಳು ಬೆಳೆಯಬೇಕು. ಈ ಊರಿನ ಹಿರಿಯರ ಪುಣ್ಯದಿಂದ ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಶತಮಾನ ಕಂಡಿದೆ. ಲಾಭ ಕಡಿಮೆಯಾದರೂ ರೈತರಿಗೆ ಆಸರೆಯಾಗಿ ಈ ಸಂಸ್ಥೆ ಇಷ್ಟು ವರ್ಷ ಬದುಕಿದೆ ಎಂಬುದು ಅಭಿಮಾನದ ಸಂಗತಿ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ರೈತರು, ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೧ ಕೋಟಿ, ೧೦ ಲಕ್ಷ ರೂ.ವೆಚ್ಚದಲ್ಲಿ ಸಂಸ್ಥೆಗೆ ಭವ್ಯ ಕಟ್ಟಡ ನಿರ್ಮಿಸಲಾಗಿದ್ದು, ಸಚಿವ ಶಿವಾನಂದ ಪಾಟೀಲರು ಇದನ್ನು ಲೋಕಾರ್ಪಣೆಗೊಳಿಸಿದ್ದು ಸಂತಸದ ಸಂಗತಿ.
ಶಿವಾನಂದ ಪಾಟೀಲರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇದೆ.
೨೭ ವರ್ಷಗಳ ಸುದೀರ್ಘ ರಾಜಕೀಯ ಬದುಕಿನ ಜತೆಗೆ ಅಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್ ಪುನರುಜ್ಜೀವನಗೊಳಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ೨೭೨ ಸಂಘಗಗಳಲ್ಲಿ ೨೩೨ ಸಂಘಗಳಿಗೆ ಸ್ವಂತ ಕಟ್ಟಡಗಳಿವೆ. ಇದಕ್ಕೂ ಮುನ್ನ ಈ ಸಂಘಗಗಳ ಸ್ಥಿತಿ ದಯನೀಯವಾಗಿತ್ತು. ಶಿವಾನಂದ ಪಾಟೀಲರ ಮುಂದಾಲೋಚನೆ, ಬದ್ಧತೆ, ಸಹಕಾರಿ ರಂಗದ ಮೇಲೆ ಅವರಿಗೆ ಇರುವ ಪ್ರೀತಿ ಶ್ಲಾಘನೀಯ ಎಂದರು.
ಗ್ರಾಮೀಣ ಭಾಗದ ಸಹಕಾರಿ ಸಂಘಗಳು ೨೦ ವರ್ಷಗಳಲ್ಲಿ ಸಾಕಷ್ಟು ವೇಗ ಪಡೆದುಕೊಂಡಿವೆ. ಇದಕ್ಕೆ ಡಿಸಿಸಿ ಬ್ಯಾಂಕ್ ಸಹಕಾರವೇ ಕಾರಣ. ಇಂದು ಡಿಸಿಸಿ ಬ್ಯಾಂಕ್‌ನಿAದ ಲಕ್ಷಾಂತರ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಸಹಕಾರಿ ಸಂಘವನ್ನು ಕಟ್ಟಬಹುದು, ಆದರೆ ಅದನ್ನು ಉಳಿಸಿ ಬೆಳೆಸುವುದು ಸುಲಭವಲ್ಲ. ಪಟ್ಟಣದ ಸಂಘ ಬೆಳೆಯಲು ಹಿಂದಿನ ಆಡಳಿತ ಮಂಡಳಿ ಶ್ರಮ ಹಾಗೂ ಗ್ರಾಮಸ್ಥರ ಸಹಕಾರ ಕಾರಣ ಎಂದರು.
ಆಲಮೇಲದಲ್ಲಿ ತೋಟಗಾರಿಕೆ ಕಾಲೇಜ್ ಆರಂಭಿಸಲು ನಮ್ಮ ತಂದೆ ೨೦೧೯ರಲ್ಲಿ ಶ್ರಮಿಸಿದ್ದರು. ಮಂಜೂರು ಕೂಡ ಮಾಡಿಸಿದ್ದರು. ಸರ್ಕಾರಗಳು ಬದಲಾದ ಮೇಲೆ ಈ ಕಾರ್ಯ ಕುಂಠಿತವಾಗಿತ್ತು. ಆದರೆ ನಾನು ಶಾಸಕನಾದ ಮೇಲೆ ಶಿವಾನಂದ ಪಾಟೀಲರ ಸಹಕಾರದಿಂದ ಮತ್ತೆ ಮಂಜೂರಾಗಿದೆ ಎಂದ ಅವರು ಮೋರಟಗಿ ಮತ್ತು ಬಳಗಾನೂರ ಗ್ರಾಮಗಳನ್ನು ಹೋಬಳಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸಚಿವರಲ್ಲಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮ ನಿ ಪ್ರ ಸಿದ್ದಲಿಂಗ ಮಹಾಸ್ವಾಮಿಗಳು ವೀರಕ್ತಮಠ ನೆಲೋಗಿ ಪಾವನ ಸಾನಿದ್ಯ ವಹಿಸಿದ್ದರು, ಪಿಕೆಪಿಎಸ್ ಅಧ್ಯಕ್ಷರು ವೀರನಗೌಡ ಪಾಟೀಲ್, ಮಾಜಿ ಜಿ ಪಂ ಸದಸ್ಯ ಎನ್ ಆಫ್ ತಿವಾರಿ, ಎಂ ಕೆ ಕಣ್ಣಿ, ಎನ್ ಎನ್ ಪಾಟೀಲ್, ಗ್ರಾ. ಪಂ. ಅಧ್ಯಕ್ಷರ ಪ್ರತಿನಿಧಿ ರವಿಕಾಂತ ನಡುವಿನಕೇರಿ, ಪಿಕೆಪಿಎಸ್ ಉಪಾಧ್ಯಕ್ಷ ಚನ್ನಬಸಪ್ಪ ದುದ್ದಗಿ, ಜೆ ಬಿ ಪಾಟೀಲ್ ಉಪ ಪ್ರಧಾನ ವ್ಯವಸ್ಥಾಪಕರು ವಿಜಯಪುರ, ಎಸ್ ಕೆ ವಡ್ಡರ ಸಹಾಯಕ ನಿಬಂಧಕರು ಸಹಕಾರಿ ಸಂಘ ಇಂಡಿ, ಆರ್ ಎಂ ಬಣಗಾರ ನಿವೃತ್ತ ವಿ ಡಿ ಸಿ ಅಧಿಕಾರಿಗಳು ವಿಜಯಪುರ, ಜಿ ಕೆ ನೆಲ್ಲಗಿ ಮಾಜಿ ಅಧ್ಯಕ್ಷರು ಪಿಕೆಪಿಎಸ್, ಇನಾಯತ ದೊಡಮನಿ, ರಜಾಕ ಬಾಗವನ, ಈರಣ್ಣ ಅರಕೇರಿ, ವಿದ್ಯಾದರು ಮಲಗಿ, ಮಲ್ಲಪ್ಪ ವಲಿಕಾರ್, ಸೈಪನ್ ಸಾಬ್ ಭಗವಾನ್, ಶಂಕ್ರಮ್ಮ ಬಿಸ್ಟಾಕಿ, ಅಂಬುಬಾಯಿ ಭಾರತಿ, ಸಂತೋಷ್ ಬಿರಾದಾರ್, ಶ್ರೀಮಂತ ತಿಪ್ಪಶೆಟ್ಟಿ, ಇರಬಸಪ್ಪ ಮಾದರ್, ಅಜರುದ್ದೀನ್ ಶಿಲೆದಾರ್, ಸಿದ್ದಣ್ಣ ಮಡ್ಡಿ, ಲಕ್ಷ್ಮಿ ಕೆರಿಗೊಂಡ ಸೇರಿದಂತೆ ಸುತ್ತಲಿನ ರೈತರು ಗ್ರಾಮಸ್ಥರು ಇದ್ದರು.

