ಜಮಖಂಡಿ: ಭಾರತ ಪ್ರಾಚೀನ ಕಾಲದಿಂದಲೂ ವಿಶ್ವಕ್ಕೆ ಗುರು ಎನಿಸಿಕೊಂಡಿದೆ. ಜನಪದ ಆಚರಣೆಗಳಾದ ಕಲೆ, ಕ್ರೀಡೆ, ಸಂಗೀತ, ಉಡುಗೆ, ತೊಡುಗೆ, ಊಟೋಪಚಾರ, ಹಾಸ್ಯ, ಹರಟೆ, ಗಾದೆ, ಒಗಟುಗಳಂತ ಅರ್ಥಪೂರ್ಣ ಆಚರಣೆಗಳ ಮೌಲ್ಯಯುತ ಸಂಪತ್ತು ಹೊಂದಿದೆ. ತನ್ಮೂಲಕ ಸಾಹಿತ್ಯಿಕವಾಗಿ ಜಗತ್ತಿಗೆ ನಮ್ಮ ಸನಾತನ ಸಂಸ್ಕೃತಿ ಹಂಚುತ್ತಾ ಶ್ರೇಷ್ಠರೆನಿಸಿಕೊಂಡಿದ್ದೇವೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಸಾಹಿತಿ ಬಾಳನಗೌಡ ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಗಣಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಸದಾನಂದ ಪಗಡಿ ತಂಡ ಆಯೋಜಿಸಿದ ರಾಜ್ಯಮಟ್ಟದ ಪಗಡಿ ಪಂದ್ಯಾವಳಿ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಪಗಡೆ ಕೇವಲ ಆಟವಲ್ಲ. ನಮ್ಮ ಸಂಸ್ಕೃತಿಯ ಅಸ್ಮಿತೆಯಾಗಿದೆ . ಇಂದಿನ ಯುವಕರು ಪಾಶ್ಚಾತ್ಯ ಸಂಸ್ಕೃಿಯತ್ತ ವಾಲುತ್ತಿರುವುದು ಆಘಾತಕಾರಿಯಾಗಿದೆ. ನಮ್ಮ ದೇಶಿ ಪದ್ಧತಿಯನ್ನು ಉಳಿಸುವ ನಿಟ್ಟಿನಲ್ಲಿ ಯುವ ಜನತೆ ಮುಂದೆ ಬರಬೇಕಾಗಿದೆ ಎಂದು ಯುವಕರಿಗೆ ಕರೆ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಕಲ್ಮೇಶಗೌಡ ನ್ಯಾಮಗೌಡ ಮಾತನಾಡಿ, ಅನೇಕ ಜನಪದ ಕಲೆಗಳಿಗೆ ಅಶ್ರಯ ನೀಡಿರುವ ಗಣಿ ಗ್ರಾಮ ಬಾಗಲಕೋಟ ಜಿಲ್ಲೆಯ ಸಾಂಸ್ಕೃತಿಕ ನೆಲೆಯಾಗಿದೆ. ಅನೇಕ ವರ್ಷಗಳಿಂದ ಪಗಡೆ ಪಂದ್ಯಾವಳಿ ನಡೆಸುತ್ತ ಗ್ರಾಮ ಭಾರತವನ್ನು ಜೀವಂತವಾಗಿಟ್ಟಿದ್ದೇವೆ. ಪಗಡೆಯಾಟಕ್ಕೆ ಸರಕಾರದ ಸಹಾಯ ಮಾಡಬೇಕು ಎಂದು ಹೇಳಿದರು.
ಗಣಿ ಪಿಕೆಪಿಎಸ್ ಅಧ್ಯಕ್ಷ ರಾಜೇಂದ್ರಗೌಡ ಪಾಟೀಲ ಪಗಡೆ ಪಂದ್ಯಾವಳಿ ಉದ್ಘಾಟಿಸಿದರು. ಹಿರಿಯರಾದ ಶ್ರೀಕಾಂತ ನಡುವಿನಮನಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗದಿಗೆಪ್ಪ ಸಿಂಗಾಡಿ, ಸಂಗನಗೌಡ ಪಾಟೀಲ, ಕೃಷ್ಣಾ ಕರೆಪ್ಪಗೊಳ, ಉಮೇಶ ಸಿಂಗಾಡಿ, ಸದಾಶಿವ ಹಸರಡ್ಡಿ, ಡಾ ಸಮೀರ ಮುಧೋಳ, ಚಂದು ಕೊರಡ್ಡಿ, ಲಕ್ಷ್ಮಣ ನಾವಿ (ಯಡಹಳ್ಳಿ) ಮತ್ತಿತರರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆಯುವ ಈ ಪಗಡಿ ಪಂದ್ಯಾವಳಿಗೆ ಬಾಗಲಕೋಟ, ವಿಜಯಪುರ, ಬೆಳಗಾವಿ ಸೇರಿದಂತೆ ಅನೇಕ ಭಾಗಗಳಿಂದ ಸುಮಾರು 40 ಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತವೆ. ಪ್ರಥಮ ಬಹುಮಾನ 50000, ದ್ವಿತೀಯ ಬಹುಮಾನ 30000, ತೃತೀಯ ಬಹುಮಾನ 20000 ಮತ್ತು 5000 ರೂಪಾಯಿಯ ನಾಲ್ಕು ಸಮಾಧಾನಕರ ಬಹುಮಾನ ಇಡಲಾಗಿದೆ ಎಂದು ತಂಡದ ಸದಸ್ಯ ಸಂಜೀವ ಪಾಟೀಲ ಹೇಳಿದರು. ಆಟಗಾರರಿಗೆ ಎರಡು ದಿವಸ ಊಟೋಪಚಾರ ಮಾಡಲಾಗಿದೆ.
ಸಿದ್ಧಾರೂಢ ಕುಂಬಾರ ಸ್ವಾಗತಿಸಿದರು. ಜ್ಞಾನೇಶ್ವರ ಕಂಬಾರ ವಂದಿಸಿದರು. ಆನಂದ ಕುಂಬಾರ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

