ಬಸವನಬಾಗೇವಾಡಿ: ಪಟ್ಟಣದ ಕೆಲವೆಡೆ ಶನಿವಾರ ಸಂಜೆ ಕಾರಹುಣ್ಣಿಮೆಯಂಗವಾಗಿ ರೈತ ಬಾಂಧವರು ಎತ್ತುಗಳನ್ನು ಓಡಿಸಿ ಕರಿ ಕರಿಯುವ ಮೂಲಕ ಸಂಭ್ರಮದಿಂದ ಕಾರಹುಣ್ಣಿಮೆ ಆಚರಿಸಿದರು. ಕಾರಹುಣ್ಣಿಮೆಯಂಗವಾಗಿ ರೈತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿರುವ ಎತ್ತು, ಕರು, ಆಕಳುಗಳ ಮೈಯನ್ನು ತೊಳೆದು ಬಣ್ಣ ಹಚ್ಚಿ ಪೂಜೆ ಮಾಡಿ ನೈವೇದ್ಯ ಅರ್ಪಿಸಿ ಉತ್ತಮ ಮಳೆ-ಬೆಳೆ ಬರಲೆಂದು ಭೂತಾಯಿ, ಭಗವಂತನಲ್ಲಿ ಪ್ರಾರ್ಥಿಸಿದರು. ಎಮ್ಮೆಗಳ ಕೊಡುಗಳಿಗೂ ಬಣ್ಣ ಹಚ್ಚಿರುವುದು ಕಂಡುಬಂದಿತ್ತು. ರೈತ ಬಾಂಧವರು ತಮ್ಮ ಜಾನುವಾರಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಸಂಭ್ರಮಿಸುವದು ಈ ಹುಣ್ಣಿಮೆಯ ವಿಶೇಷ.ಕರಿ ಹರಿಯಲು ಎತ್ತುಗಳ ಕೊರತೆ ಎದ್ದು ಕಾಣುತ್ತಿತ್ತು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಗುರ್ಜಿ ಕಟ್ಟಿ ಹತ್ತಿರ ಕಾರಹುಣ್ಣಿಮೆಯಂಗವಾಗಿ ಮೊದಲು ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ರೈತ ಬಾಂಧವರು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ, ಸತ್ಯಪ್ಪ ಖ್ಯಾಡ, ಬಸವರಾಜ ಶೆಂಡೆ, ಬಸವರಾಜ ಬಾಡಗಿ, ಈಶಪ್ಪ ಬಿದರಕುಂದಿ, ಅರವಿಂದ ಗೊಳಸಂಗಿ, ಬೀರಪ್ಪ ಪೂಜಾರಿ, ಸಿದ್ದು ಶೆಂಡೆ ಸೇರಿದಂತೆ ಇತರರು ಇದ್ದರು.
ನಂತರ ಗಣಪತಿ ವೃತ್ತದಲ್ಲಿಯೂ ಕರಿ ಹರಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಗುಂಡು ಎತ್ತಿ ಮಳೆ-ಬೆಳೆ ಭವಿಷ್ಯ ಕೇಳಲಾಯಿತು. ಇದಾದ ನಂತರ ಗೌರಿಶಂಕರ ಗಲ್ಲಿಯಲ್ಲಿ ಕರಿ ಹರಿಯುವ ಸಂಪ್ರದಾಯವಿದ್ದರೂ ಇಲ್ಲಿ ಕರಿ ಹರಿಯಲು ಎತ್ತುಗಳು ಸಿಗಲಿಲ್ಲ ಎಂಬ ಮಾತು ಕೇಳಿಬಂದಿತ್ತು.
ಪಟ್ಟಣದ ಸಂಗೊಳ್ಳಿ ರಾಯಣ್ಣ ನಗರದಲ್ಲಿರುವ ಯಲ್ಲಾಲಿಂಗ ದೇವಸ್ಥಾನದ ಮುಂಭಾಗ ಎರಡು ಕರುಗಳನ್ನು ಓಡಿಸುವ ಮೂಲಕ ಕರಿ ಹರಿಯುವ ಸಂಪ್ರದಾಯ ಆಚರಿಸಲಾಯಿತು. ನಂತರ ಯಲ್ಲಾಲಿಂಗ ದೇವಸ್ಥಾನ ಆವರಣದಲ್ಲಿ ಕಲ್ಲು-ಗುಂಡುಗಳನ್ನು ರೈತ ಬಾಂಧವರು ಎತ್ತ್ಯಾಡಿದರು. ಕರಿ ಹರಿಯುವದನ್ನು ನೋಡಲು ಅಪಾರ ಸಂಖ್ಯೆಯ ಯುವಕರು ಸೇರಿದಂತೆ ಅನೇಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಜ್ಯೋತಿಬಾ ಪವಾರ, ಬಸವರಾಜ ವಾಲೀಕಾರ, ಬಸಪ್ಪ ಒಡೆಯರ, ಪ್ರವೀಣ ಪೂಜಾರಿ, ರಾಮು ಬಸ್ತಾಳ, ಶಂಕರ ಉಕ್ಕಲಿ, ಶ್ರೀಶೈಲ ಹಿರೇಮಠ, ಸಂಜು ಪೂಜಾರಿ, ವಿಜಯ ಗೊಳಸಂಗಿ, ಗುರು ಯರನಾಳ, ಮಲ್ಲು ಇಂಗಳೇಶ್ವರ, ಬಸವರಾಜ ವಾಲೀಕಾರ, ಆನಂದ ಮೇಟಿ, ಶಿವಪ್ಪ ಯರನಾಳ ಸೇರಿದಂತೆ ಇತರರು ಇದ್ದರು.
ಕರಿ ಹರಿಯುವ ಸ್ಥಳದಲ್ಲಿ ರೈತ ಬಾಂಧವರು, ಜನರು ಎತ್ತು-ಕರುಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಿಸಿ ಕರಿ ಹರಿದರು. ಎರಡು ಬದಿಗಳಲ್ಲಿ ನಿಂತ ಜನರ ಕೂಗಾಟದ ಮಧ್ಯೆ ಎತ್ತು, ಕರುಗಳು ರಭಸವಾಗಿ ಇನ್ನೊಂದು ಬದಿಗೆ ತಲುಪಿದವು. ಕರಿ ಹರಿದ ನಂತರ ಜನರು ಎತ್ತರವಾಗಿ ಕಟ್ಟಿರುವ ಬೇವಿನ ತಪ್ಪಲು, ಕೊಬ್ಬರಿ ಬಟ್ಟಲ, ಬಾಳೆಹಣ್ಣು ಪಡೆಯಲು ಒಬ್ಬರ ಮೇಲೆ ಒಬ್ಬರು ಹತ್ತಿಕೊಂಡು ಪಡೆದುಕೊಳ್ಳಲು ಸ್ಪರ್ಧೆ ಮಾಡಿದರು. ಕೊನೆಯಲ್ಲಿ ಸಿಕ್ಕುವರು ಸಂತಸದ ನಗೆ ಬೀರಿದರು. ಇಂದು ತಾಲೂಕಿನ ಟಕ್ಕಳಕಿ, ಕಣಕಾಲ ಸೇರಿದಂತೆ ಕೆಲವೆಡೆ ಕಾರಹುಣ್ಣಿಮೆಯಂಗವಾಗಿ ಕರಿ ಹರಿಯುವ ಮೂಲಕ ಜನರು ಕಾರಹುಣ್ಣಿಮೆಯನ್ನು ಆಚರಿಸಿದರು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶನಿವಾರವೇ ಕಾರಹುಣ್ಣಿಮೆಯನ್ನು ಆಚರಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

