3ವರ್ಷವಾದರೂ ಅನುಸ್ಥಾಪನೆಯಾಗದ ರೈಸ್ ಸ್ಟೀಮರ್ | ಒಡೆದ ಕಿಟಕಿಗಳು | ನೀರು ಪೂರೈಕೆ ಕೊರತೆ
– ರಶ್ಮಿ ನೂಲಾನವರ
ಸಿಂದಗಿ: ತಾಲೂಕಿನ ಗುಬ್ಬೆವಾಡ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ನೀರು, ಶೌಚಾಲಯ ನೀರು ಪೊರೈಕೆ ಕೊರತೆ, ಒಳಚರಂಡಿ ದುರಸ್ತಿ ಸೇರಿ ವಿವಿಧ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಹಲವು ವರ್ಷಗಳಿಂದ ಕೆಲವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಇಲ್ಲಿನ ವಸತಿ ಶಾಲೆಯಲ್ಲಿ ೬ರಿಂದ೧೦ನೆಯ ತರಗತಿಯವರೆಗೆ ೨೩೦ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳುತಿದ್ದಾರೆ. ಮೂಲ ಸೌಕರ್ಯಗಳ ಸಮಸ್ಯೆ ಇಲ್ಲಿ ಬಲವಾಗಿ ಕಾಡುತ್ತಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ದುರಸ್ತಿ ಭಾಗ್ಯ ಕಾಣದ ಶೌಚಾಲಯ, ಮಲಗುವ ಕೋಣೆ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹಲವು ಸಮಸ್ಯೆಗಳು ಕಾಣ ಸಿಗುತ್ತವೆ. ಇದು ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದ ಮೂರಾರ್ಜಿ ವಸತಿ ಶಾಲೆಯ ದುಸ್ಥಿತಿ. ಕಳೆದ ಐದು ವರ್ಷಗಳಿಂದ ವಸತಿ ಶಾಲೆಯ ಯಾವುದೇ ರೀಪೆರ್ ಕಾರ್ಯವಾಗಿಲ್ಲ. ಇನ್ನಾದರೂ ಸರಕಾರ ದುರಸ್ತಿ ಭಾಗ್ಯ ನೀಡುವುದೇ ಎಂಬುದು ಕಾದು ನೋಡಬೇಕಿದೆ ಎಂಬುದು ಪಾಲಕರ ಮಾತಾಗಿದೆ.
ರೈಸ್ ಸ್ಟೀಮರ್ ಅಳವಡಿಕೆ ಇಲ್ಲ: ಕಳೆದು ಮೂರು ವರ್ಷಗಳಿಂದ ತಾಲೂಕಿನ ನಾಲ್ಕು ವಸತಿ ಶಾಲೆಯಗಳಲ್ಲಿ ರೈಸ್ ಸ್ಟೀಮರ್‌ಗಳನ್ನು ತಂದು ಇಡಲಾಗಿದೆ. ಅದರಲ್ಲಿ ಗುಬ್ಬೆವಾಡ ಗ್ರಾಮದ ವಸತಿ ಶಾಲೆಯಲ್ಲಿಯೂ ಸಹ ತಂದಿಟ್ಟು ಮೂರು ವರ್ಷ ಕಳೆದರೂ ಇನ್ನೂ ಅನುಸ್ಥಾಪನೆ ಮಾಡದೇ ಇರುವುದು ಇಲಾಖೆಯ ಬೇಜವಾಬ್ದಾರಿಯಾಗಿದೆ.
ಮಳೆ ಬಂದರೆ ನೀರು ಕೋಣೆಯೊಳಗೆ: ಬಾಲಕರ ಮತ್ತು ಬಾಲಕಿಯರ ವಸತಿಯದ ವಿದ್ಯಾರ್ಥಿಗಳ ಖೊಣೆಯ ಕಿಟಕಿಗಳು ಒಡೆದು ಹೋದರು ರಿಪೇರಿಯಾಗಿಲ್ಲ. ಮಳೆ ಬಂದರೆ ಕಿಟಕಿಯಿಂದ ನೀರು ಒಳ ಬಂದು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಕಳೆದ ವರ್ಷದ ಮೇಲಾಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಹಾಗೆ ಇತ್ತು ಈಗಾಲೂ ರಿಪೇರಿಯಾಗದೆ ಹಾಗೆಯೇ ಇದೆ. ಇದನ್ನೂ ಕೂಡಲೇ ರಿಪೇರಿ ಮಾಡಿಸಬೇಕು ಎಂದು ಡಿಡಿ ಅವರಿಗೆ ಪತ್ರ ಬರೆಯಿರಿ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಪ್ರಾಚಾರ್ಯರಿಗೆ ಸೂಚಿಸಿದರು.
ಊಟದ ಆಸನಗಳ ಕೊರತೆ: ಪ್ರಸ್ತುತ ವಸತಿ ಶಾಲೆಯಲ್ಲಿ ೨೩೦ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದಾರೆ. ಅವರು ಏಕ ಕಾಲಕ್ಕೆ ಭೋಜನಾಲಯ ಗೃಹಕ್ಕೆ ಉಪಹಾರಕ್ಕೆಂದು ಆಗಮಿಸಿದರೆ ಕುಳಿತುಕೊಂಡು ಊಟ ಮಾಡಲು ಆಸಗಳ ಕೊರತೆ ಇದೆ. ಆದಷ್ಟೂ ಬೇಗ ಇನ್ನಷ್ಟೂ ಆನಸಗಳ ವ್ಯವಸ್ಥೆ ಮಾಡಬೇಕು ಎಂದು ಜೂ.೨೦ರಂದು ವಾಸ್ಥವ್ಯ ಹೂಡಿದ ಸಂದರ್ಭದಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದರು.
“ಶಾಲೆಯ ದುರಸ್ತಿ, ಸುಣ್ಣ ಬಣ್ಣ, ಶೌಚಾಲಯ ದುರಸ್ತಿ, ನೀರಿನ ಕೊರೆತೆ ಮತ್ತು ಕೋಣೆಯ ಕಿಟಕಿಗಳ್ ಸ್ಥಿತಿಯ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯ ಸಣ್ಣ ಪುಟ್ಟ ಕಾರ್ಯಗಳನ್ನು ನಮ್ಮ ಕೈಲಾದ ಮಟ್ಟಿಗೆ ಸರಿಪಡಿಸಿದ್ದೇವೆ. ದೊಡ್ಡ ಕೆಲಸಗಳೆಲ್ಲ ಇಲಾಖೆಯಿಂದಾಗಬೇಕು. ಆದಷ್ಟು ಬೇಗ ನೀರಿನ ಸೌಲಭ್ಯ ಒದಗಿಸಿಕೊಟ್ಟರೆ ಅನುಕೂಲವಾಗುತ್ತದೆ.
– ಆರ್.ಬಿ.ಬಂಥನಾಳ
ಪ್ರಾಚಾರ್ಯರು
” ೨೦೦೨ರಲ್ಲಿ ಕಟ್ಟಡ ನಿರ್ಮಾಣವಾಗಿದ್ದು ಇದೆ. ಹಳೆಯ ಕಟ್ಟಡವಿದು. ಕೆಲವು ಕಡೆ ಬಿರುಕು ಬಿಟ್ಟಿದ್ದು ಗ್ಲಾಸ್ ಒಡೆದಿರುವುದು ನಾನು ಕಣ್ಣಾರೆ ನೋಡಿರುವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೂ ಆಯೋಗಕ್ಕೆ ಪತ್ರ ಬರೆಯಬೇಕು. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯಗಳು ಮಾಡಿಕೊಟ್ಟು ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅನುಕೂಲ ಮಾಡಿಕೊಡಬೇಕು.”
– ಶಶಿಧರ ಕೋಸಂಬೆ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರು

