ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುತ್ತಿಗೆದಾರರ ಆಹೋರಾತ್ರಿ ಧರಣಿ ಆರಂಭ
ಆಲಮಟ್ಟಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷ್ಣಾ ತೀರ ಗುತ್ತಿಗೆದಾರರ ಸಂಘ ಕಳೆದ ಮೂರು ದಿನಗಳಿಂದ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಆರಂಭಿಸಿದ್ದ ಧರಣಿ ಸತ್ಯಾಗ್ರಹ ಶನಿವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವಾಗಿ ಪರಿವರ್ತನೆಗೊಂಡಿತು.
ಕೆಬಿಜೆಎನ್‌ಎಲ್ ನಲ್ಲಿ ಕಳೆದ ವರ್ಷ ಕರೆದಿದ್ದ ಕಾಮಗಾರಿಗಳ ಟೆಂಡರ್ ತೆರೆದು ಕಾಮಗಾರಿ ಆದೇಶ ನೀಡಿಲ್ಲ, ಆಗ ಟೆಂಡರ್ ಜತೆ ನೀಡಿದ್ದ ಇಎಂಡಿ ಹಣವನ್ನು ಪಾವತಿಸಿಲ್ಲ, ಹೀಗಾಗಿ ನೂರಾರು ಗುತ್ತಿಗೆದಾರರ ಕೋಟ್ಯಂತರ ಹಣ ಇಎಂಡಿ ರೂಪದಲ್ಲಿ ನಿಗಮದಲ್ಲಿದೆ, ಇಎಂಡಿ ಹಣ ಮರಳಿಸಬೇಕು, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದರು.
ಮೊದಲು ಧರಣಿ ಸತ್ಯಾಗ್ರಹ ನಡೆಸಿದ್ದೇವೆ, ಈಗ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ. ಇದಕ್ಕೂ ಕೆಬಿಜೆಎನ್‌ಎಲ್ ಅಧಿಕಾರಿಗಳು ಸ್ಪಂದಿಸದಿದ್ದರೇ ಜೂನ್ ೨೫ ರಂದು ಮುಖ್ಯ ಎಂಜಿನಿಯರ್ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ಎ. ಮೇಟಿ ಹೇಳಿದರು.
ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಮಹಾಂತೇಶ ಬೆಳಗಲ್ಲ, ಎಂ.ಆರ್. ಕಮತಗಿ, ಬಸವರಾಜ ದಂಡಿನ, ಚಂದ್ರಶೇಖರ ಪಳನಿ, ಮಂಜುನಾಥ, ಸತೀಶ ಪಾಟೀಲ, ರಾಘು ಪತ್ತಾರ, ಯಾಕೂಬ್ ಮುದ್ನಾಳ, ಚನ್ನಬಸು ಅಂಗಡಿ, ಸಲೀಂ ಮೇಲಿನಮನಿ, ಸುನಿಲಗೌಡ ಪಾಟೀಲ, ಸಂತೋಷ ಮರಡಿ, ಎಂ.ಡಿ. ಯುಸೂಫ್, ಬಿ.ಪಿ. ರಾಠೋಡ, ಎಚ್.ಜಿ. ಯಂಡಿಗೇರಿ, ಟಿ.ಎಸ್. ಅಫಜಲಪುರ, ಮಹಾಂತೇಶ ಡೆಂಗಿ, ಮಹಾಂತೇಶ ಬಿಜಾಪುರ ಮತ್ತಿತರರು ಇದ್ದರು.

