ಮುದ್ದೇಬಿಹಾಳ: ವಿದ್ಯಾರ್ಥಿಗಳು ಪಠ್ಯ ಮಾತ್ರವಲ್ಲದೇ ಇತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪಠ್ಯಪುಸ್ತಕ ಅಂಕಗಳನ್ನು ತಂದುಕೊಟ್ಟರೆ ಇತರ ಪುಸ್ತಕಗಳು ಜ್ಞಾನಾರ್ಜನೆಯನ್ನು ತಂದುಕೊಡುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ತಾಲೂಕಿನ ಮಡಿಕೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಐವತ್ತು ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ಜ್ಞಾನ ಪಡೆಯುವ ಏಕೈಕ ಸಾಧನವೆಂದರೆ ಅದು ಪುಸ್ತಕ. ಸಮಯ ಸದುಪಯೋಗ ಮಾಡಿಕೊಂಡು ಅಧ್ಯಯನಶೀಲ ಸದ್ಗುಣಗಳನ್ನು ಅಳವಡಿಸಿಕೊಂಡು ಜ್ಞಾನವಂತರಾಗಿ ದೇಶದ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯಬೇಕು. ಜಾನಪದ ಸಮ್ಮೇಳನ ಹಾಗೂ ಮಕ್ಕಳ ಸಮ್ಮೇಳನ ಮಾಡುವ ಸಂಕಲ್ಪ ನಮ್ಮದಾಗಿದೆ ಎಂದರು.
ಪ್ರೌಢ ಶಾಲೆಯ ಸಹ ಶಿಕ್ಷಕ ಬಸವರಾಜ ಹಂಚಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲ ಚಟುವಟಿಕೆಗಳಿಂದ ಜಿಲ್ಲೆಯ ಗಮನ ಸೆಳೆದಿದೆ. ಅನೇಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಸಾಹಿತ್ಯ ನಿಂತ ನೀರಾಗದೆ ಹರಿಯುತ್ತಿರುವ ಜಲಧಾರೆಯಾಗಲಿ ಎಂದರು.
ಹಿರಿಯ ಶಿಕ್ಷಕ ಎಸ್ ಎಸ್ ಬಾಬಣ್ಣವರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಉಳಿಸುವ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಮುಖ್ಯ ಅಧ್ಯಾಪಕಿ ಬಸಮ್ಮ ರೂಡಗಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಗಣೇಶ ಮಂಗಳೂರ, ಜಯಶ್ರೀ ಹಿರೇಮಠ. ಚೈತನ್ಯ ಮುದ್ದೇಬಿಹಾಳ, ಮಂಜುಳಾ ಹೂಗಾರ, ಎಸ್.ಡಿ.ಬಾಗೆವಾಡಿ, ಪರವೀನ ಕುಂಟೋಜಿ, ಭಾಗ್ಯಾ ಚಲವಾದಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಂಕಿತಾ, ರೇಣುಕಾ, ಅಂಜಲಿ ಪ್ರಾರ್ಥಿಸಿದರು. ಸಾಹಿತಿ ಅಂಬಿಕಾ ಕರಕಪ್ಪಗೋಳ ಸ್ವಾಗತಿಸಿ ಪರಿಚಯಿಸಿದರು. ದೈಹಿಕ ಶಿಕ್ಷಕ ಮಹೇಶ ಕೊಣ್ಣೂರ ನಿರೂಪಿಸಿದರು. ಕವಿಯತ್ರಿ ಶಾಂತಾ ಪಾಟೀಲ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

