ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅಭಿಮತ
ಸಿಂದಗಿ: ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸುವುದು ಅತ್ಯಗತ್ಯ. ಪರಿಸರವನ್ನು ಸಂರಕ್ಷಿಸುವ, ಪೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಿದಕ್ಕೆ ಪ್ರಾಚಾರ್ಯರಿಗೂ ಹಾಗೂ ಸಿಬ್ಬಂದಿಗಳಿಗೂ ಪ್ರಸಂಶನೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ವ್ಯಕ್ತಪಡಿಸಿದರು.
ತಾಲೂಕಿನ ಗುಬ್ಬೆವಾಡ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ರಾತ್ರಿ ವಾಸ್ಥವ್ಯ ಹೂಡಿ ಮಕ್ಕಳ ಜೊತೆ ಊಟ ಮಾಡಿದ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮೂರಾರ್ಜಿ ವಸತಿ ಶಾಲೆಗಳು ಪರಿಸರ ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ವಸತಿ ನಿಲಯಗಳಲ್ಲಿ ಮಕ್ಕಳ ತಮ್ಮ ವಿಷಯಗಳನ್ನು ಹೇಳಲಿಕ್ಕೆ ಸಲಹಾ ಪೆಟ್ಟಿಗೆ ಅಳವಡಿಸಬೇಕು. ಊಟದ ಮೆನು ಮಕ್ಕಳ ಕಾಣುವ ರೀತಿಯಲ್ಲಿ ಹಾಕಬೇಕು. ಮೂರು ವರ್ಷವಾದರೂ ಸ್ಟಿಮ್ ಅಳವಡಿಕೆ ಅನುಸ್ಥಾಪನೆ ಮಾಡಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಬಳಿಕ ವಿಜಯಪುರ ಡಿಡಿ ಅವರಿಗೆ ಕರೆ ಮಾಡಿ ಅದನ್ನು ಅನುಸ್ಥಾಪನೆ ಮಾಡುವಂತೆ ಸೂಚಿಸಿದರು.
ಕಳೆದ ಐದು ವರ್ಷಗಳಿಂದ ವಸತಿ ಶಾಲೆಯ ಯಾವುದೇ ರೀಪೆರಿ ಕಾರ್ಯ ಆಗಿಲ್ಲ. ಕೂಡಲೇ ಮಾಡಿಸುವಂತೆ ಪ್ರಾಚಾರ್ಯರಿಗೆ ತಿಳಿಸಿದರು. ಮಕ್ಕಳ ಊಟದ ಆಸನಗಳು ಕಡಿಮೆ ಇರುವ ಕಾರಣ ಕುಳಿತುಕೊಂಡು ಊಟ ಮಾಡಲೂ ಸಾಧ್ಯವಾಗುತ್ತಿಲ್ಲ. ಕಾರಣ ಊಟದ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಎಂದು ಸಲಹೆ ನೀಡಿ ಮಕ್ಕಳ ಕುಂದು ಕೊರತೆಗಳನ್ನು ಆಲಿಸಿದರು. ಬಳಿಕ ಶುಕ್ರವಾರ ಬೆಳಿಗ್ಗೆ ಅಲ್ಲಿನ ಶಾಲಾ ಮಕ್ಕಳ ಜೊತೆಗೆ ಭಾಗವಹಿಸಿ ಯೋಗಾಭ್ಯಾಸ ನಡೆಸಿ ಗಮನ ಸೆಳೆದರು.
ಈ ವೇಳೆ ಪ್ರಾಚಾರ್ಯ ಆರ್.ಬಿ. ಬಂಥನಾಳ ಮಾತನಾಡಿ, ಶಾಲಾ ದುರಸ್ಥಿಗಾಗಿ ಹಲವಾರು ಬಾರು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದರೂ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರ ಮಾರ್ಗದರ್ಶನ ಮೂಲಕ ಇನ್ನೊಮ್ಮೆ ಪತ್ರ ಬರೆಯುವೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳ ರಕ್ಷಣಾಧಿಕಾರಿ ಮೌನೇಶ ಪೋತದಾರ, ಕಾಶೀನಾಥ ಅಂಬಿಗೇರ್, ಸಿಡಿಪಿಒ ಶಂಭುಲಿಂಗ ಹಿರೇಮಠ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

