ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಇಂಡಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮ ಖಂಡಿಸಿ ಮೈತ್ರಿ ಪಕ್ಷದ ಕಾರ್ಯಕರ್ತರು ನಗರದ ಹೃದಯ ಭಾಗದ ಬಸವೇಶ್ವರ ವೃತ್ತದಲ್ಲಿ ಸುಮಾರು 10 ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಗುರುವಾರ ಪಟ್ಟಣದ ಡಾ.ಆರ್ ಅಂಬೇಡ್ಕರ್ ವೃತ್ ದಿಂದ ಬಸವೇಶ್ವರ ವೃತ್ತದ ವರಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನಾ ಘೋಷಣೆಗಳ ದಿಕ್ಕಾರ ಕೂಗಿ ನೂರಾರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾ ಪರಾಜಿತ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಹಾಗೂ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಡಿ ಪಾಟೀಲ ಅವರು ಮಾತನಾಡಿ, ಕಾಂಗ್ರೆಸ್ ದುರಾಡಳಿತ ನೀತಿ, ವಾಲ್ಮೀಕಿ ನಿಗಮದ ಹಗರಣ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ರೈತರ ಬಿತ್ತನೆ ಬೀಜಕ್ಕೆ ಬೆಲೆ ಏರಿಕೆ, ರಾಜ್ಯದಲ್ಲಿ ಸಂಪೂರ್ಣ ಭದ್ರತಾ ವೈಫಲ್ಯ, ಹದಗೆಟ್ಟ ರಸ್ತೆಗಳ ವ್ಯವಸ್ಥೆ ಹೀಗೆ ಸಂಪೂರ್ಣ ನಿಷ್ಕ್ರಿಯ ಕಾಂಗ್ರೆಸ್ ಸರಕಾರದ ನೀತಿಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಬಡವರ ನೆಮ್ಮದಿ ಜೀವನವನ್ನೇ ಹಾಳು ಮಾಡಿದೆ, ಕಳೆದ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆ ಬರದ ಬವಣೆಗೆ ಸಿಲುಕಿದ್ದ ಬಡಜನರಿಗೆ ಸರ್ಕಾರ ಬೆಲೆ ಹೆಚ್ಚಳ ಮಾಡುವ ಮೂಲಕ ಮತ್ತೆ ಗಾಯದ ಮೇಲೆ ಬರೆ ಎಳೆದಿದೆ. ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು, ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅನೀಲ ಜಮಾದಾರ, ಡಾ.ರಮೇಶ್ ರಾಠೋಡ, ಶ್ರೀಕಾಂತ ದೇವರ, ನಾಗೇಶ ಹೆಗಡ್ಯಾಳ ಅವರು ಮಾತನಾಡಿ, ಪೆಟ್ರೋಲ್, ಡೀಸೆಲ್, ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದು, ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸರಕಾರದಲ್ಲಿ ಅಕ್ರಮ ತಾಂಡವಾಡುತ್ತಿದೆ. 20 ರೂ. ಬಾಂಡ್ ಪೇಪರ್ 100 ರೂಪಾಯಿ, 10 ರೂ. ಪಹಣಿ ಉತಾರಿ ಇಂದು 25 ರೂಪಾಯಿ ಹೆಚ್ಚಿಸಿ, ಇನ್ನೂ ರೈತ ಕೃಷಿ ಚಟುವಟಿಕೆಗಳು ಟ್ಯಾಕ್ಟರ್ ಮೂಲಕ ನಿರ್ವಹಿಸುತ್ತಾನೆ. ಆದರೆ ಆ ಟ್ಯಾಕ್ಟರ್ ಅವಶ್ಯವಿರುವ ಡಿಜೈಲ್ ಬೆಲೆ ಗಗನಕ್ಕೇರಿದೆ. ಆದ್ದರಿಂದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಿಸಿ ರೈತರ ಮತ್ತು ಜನಸಾಮಾನ್ಯರನ್ನ ಸಂಕಷ್ಟಕ್ಕೆ ಕಾಂಗ್ರೆಸ್ ಸರಕಾರ ದೂಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಹಣಮಂತರಾಯಗೌಡ ಪಾಟೀಲ, ವಿಜಯಲಕ್ಷ್ಮೀ ರೂಗಿಮಠ, ಪುರಸಭೆ ಸದಸ್ಯ ದೇವೇಂದ್ರ ಕುಂಬಾರ, ವೆಂಕಟೇಶ ಕುಲಕರ್ಣಿ, ಮಲ್ಲಿಕಾರ್ಜುನ ವಾಲಕಾರ, ರಾಮಸಿಂಗ್ ಕನ್ನೊಳ್ಳಿ, ಅಶೋಕಗೌಡ ಬಿರಾದಾರ, ಸಂಜು ದಶವಂತ, ಶರಣಗೌಡ ಬಂಡಿ, ಶಿವು ಬಗಲಿ, ಅಣ್ಣಾರಾಯ ಮದರಿ, ಮಹಿಬೂಬ್ ಬೇವನೂರ, ಶಾಂತು ಕಂಬಾರ, ಎಸ್ಟಿ ಮೂರ್ಚಾ ಅಧ್ಯಕ್ಷ ಆರ್ ಆರ್ ಕೋಳಿ, ಅನುಸೂಯೆ ಮದರಿ, ಭೌರಮ್ಮ ನಾವಿ, ಸುನಂದ ಗಿರಣಿವಡ್ಡರ್, ಶ್ಯಾಮಲಾ ಬಗಲಿ ಇತರರು ಇದ್ದರು.
“ಟಕಾ ಟಕ್ ಟಕಾ ಟಕ್ ಅಂತಾ ಸುಳ್ಳು ಭರವಸೆ, ಆಶ್ವಾಸನೆ ನೀಡುತ್ತಿರುವ ನಿಷ್ಕ್ರಿಯ ಕಾಂಗ್ರೆಸ್ ಸರಕಾರ. ಸುಮಾರು ಒಂದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ತಾಲೂಕಿನಲ್ಲಿ ಗಮನಿಸಬೇಕು. ಬಹುತೇಕ ತಾಲ್ಲೂಕಿನ ಎಲ್ಲಾ ರಸ್ತೆಗಳು ಹದಗೆಟ್ಟು ಹಾಳಾಗಿ ಹೋಗಿವೆ. ಪ್ರತಿನಿತ್ಯ ಪ್ರಯಾಣಿಕರು, ರೈತರು ಸರಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಅದರಲ್ಲೂ ಪೆಟ್ರೋಲ್ ಡಿಜೈಲ್ ಮತ್ತು ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಎತ್ತರಕ್ಕೆ ತಂದು ನಿಲ್ಲಿಸಿದ್ದಾರೆ. ಒಂದು ವೇಳೆ ವಸ್ತುಗಳ ಬೆಲೆ ತಗ್ಗಿಸದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ಮಾಡಲಾಗುತ್ತದೆ.”
– ಕಾಸುಗೌಡ ಬಿರಾದಾರ
ಬಿಜೆಪಿ ಜಿಲ್ಲಾ ಮುಖಂಡರು, ಇಂಡಿ

